ನವದೆಹಲಿ(PTI): ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಅಮೆರಿಕದಿಂದ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
166 ಮಂದಿಯ ಜೀವ ಬಲಿ ತೆಗೆದುಕೊಂಡ, 26/11ರ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಅಲ್ಲಿನ ನಾಯಕರ ಪಾತ್ರವನ್ನು ಹೊರಗೆಳೆಯಲು ರಾಣಾ ಹಸ್ತಾಂತರವು ತನಿಖಾ ಸಂಸ್ಥೆಗಳಿಗೆ ನೆರವಾಗಲಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ದೇಶದ ವಿವಿಧ ತನಿಖಾ ಏಜೆನ್ಸಿಗಳ ತಂಡವು ಅಮೆರಿಕಕ್ಕೆ ತೆರಳಿದ್ದು, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾನನ್ನು ಭಾರತಕ್ಕೆ ಕರೆತರಲು ಎಲ್ಲ ದಾಖಲೆಗಳನ್ನು ಒದಗಿಸಲಾಗುತ್ತಿದ್ದು, ಕಾನೂನು ಪ್ರಕ್ರಿಯೆಯಗಳನ್ನು ಪೂರೈಸಲಾಗುತ್ತಿದೆ. ರಾಣಾನನ್ನು ಶೀಘ್ರದಲ್ಲೇ ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹಸ್ತಾಂತರ ವಿರೋಧಿಸಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಕೆಲವೇ ದಿನಗಳಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದ್ದು, ಆತನನ್ನು ಈಗ ಭಾರತಕ್ಕೆ ಹಸ್ತಾಂತರಿಸಬೇಕಿದೆ. ಗಡೀಪಾರು ಪ್ರಕ್ರಿಯೆ ನಂತರ ರಾಣಾನನ್ನು ಮೊದಲು ಎನ್‌ಐಎ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ರಾಣಾನನ್ನು ಸದ್ಯ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಈತನಿಗೆ 26/11 ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ನಂಟು ಇರುವುದು ತನಿಖೆಯಿಂದ ತಿಳಿದುಬಂದಿದೆ.




