ಕಾಸರಗೋಡು : ನಗರದ ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ನಡೆದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಹಾಗೂ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ ಕನ್ನಡಗ್ರಾಮ ಸಭಾಂಗಣದಲ್ಲಿ ಜರುಗಿತು. ಸಮ್ಮೇಳನದ ಸರ್ವಾಧ್ಯಕ್ಷ, ಚುಟುಕು ಕವಿ, ಬರಹಗಾರ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಲ್ಲಿನ ಕವಿ,
ಸಾಹಿತಿ, ಬರಹಗಾರರು, ಪತ್ರಕರ್ತರು, ಕನ್ನಡ ಸಂಘಟನೆಗಳ ನಿರಂತರ ಕಾರ್ಯ ಶ್ಲಾಘನೀಯ. ನಮ್ಮ ಭಾಷೆ ನೆಲ ಜಲ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಹೊತ್ತ ಬರಹಗಾರರೆಲ್ಲರೂ ಅಭಿನಂದನಾರ್ಹವಾಗಿದ್ದಾರೆ. ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವುದು ಕೇವಲ ಬರಹಗಳಿಗೆ ಸೀಮಿತವಾಗಿರದೆ ಕಲೆ, ಸಂಗೀತ, ನೃತ್ಯ, ಯಕ್ಷಗಾನ, ನಾಟಕ,ಜಾನಪದ ಪ್ರದರ್ಶನ ಇವುಗಳನ್ನು ಅಭಿವ್ಯಕ್ತಿಗೊಳಿಸುವ ಕಲಾಗಾರರಿಗೂ ಮನ್ನಣೆ ಸಲ್ಲಿಸಬೇಕಾಗುತ್ತದೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25 ವರ್ಷಗಳಿಂದ ಚುಟುಕು ಸಾಹಿತ್ಯ ಸಮ್ಮೇಳನ, ರಾಜ್ಯ ಜಿಲ್ಲಾ ತಾಲ್ಲೂಕು ಮಟ್ಟದ ಚುಟುಕು ಕವಿಗೋಷ್ಟಿ ಕಮ್ಮಟ ತರಬೇತಿ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಕಾಸರಗೋಡಿನಲ್ಲಿ ನೂರಾರು ಕವಿಗಳು ಬೆಳೆದು ಬಂದಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಲ್ಲಿ ನಿರಂತರ ಮಲಯಾಳೀ ಕರಣದಿಂದ ಕನ್ನಡ ಮಕ್ಕಳ ಕೊರತೆಯಿಂದ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಹೋಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಗಡಿನಾಡಿನ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಕೃತಿಯನ್ನು ಕಾಯ್ದುಕೊಳ್ಳಲು ಶೀಘ್ರದಲ್ಲಿ ಉನ್ನತ ಮಟ್ಟದ ಕನ್ನಡ ಶಿಕ್ಷಣ ಸಂರಕ್ಷಣಾ ಯೋಜನೆಯನ್ನು ಕೈಗೊಳ್ಳಬೇಕು. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೇತೃತ್ವ ನೀಡಬೇಕು ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕ ಡಾ.ಎಂ.ಜಿ. ಆರ್. ಅರಸ್ ಸಮ್ಮೇಳನ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಹರಿ ಕಿರಣ್ ಬಂಗೇರ, ವಿ. ಕೆ. ಎಂ. ಕಲಾವಿದರು (ರಿ )ಬೆಂಗಳೂರು ಪ್ರದಾನ ಕಾರ್ಯದರ್ಶಿ ಸಿ. ಎಂ. ತಿಮ್ಮಯ್ಯ, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎಸ್. ಶಾಸ್ತ್ರಿ, ಡಾ. ರತ್ನ ಹಾಲಪ್ಪ ಗೌಡ ಮೈಸೂರು, ಆಯಿಷಾ ಎ. ಎ. ಪೆರ್ಲ, ಡಾ.ಕೆ. ಸಿ. ಬಲ್ಲಾಳ್ ಬೆಂಗಳೂರು, ಸೀತಾ ಲಕ್ಷ್ಮಿ ವರ್ಮ ವಿಟ್ಲ ಅರಮನೆ, ದಯಾಸಾಗರ ಚೌಟ ಮುಂಬಯಿ, ಜಯರಾಜ ಶೆಟ್ಟಿ ಚಾರ್ಲ ಮಂಜೇಶ್ವರ, ಅಪ್ಪಾಸಾಹೇಬ ಅಲಿಬಾದಿ ಅಥಣಿ, ಹಮೀದ್ ಹಸನ್ ಮಾಡೂರು, ಡಾ. ಕೆ.ಎನ್ ವೆಂಕಟರಮಣ ಹೊಳ್ಳ, ಶ್ರೀಕೃಷ್ಣಯ್ಯ ಅನಂತಪುರ, ಡಾ. ಸುರೇಶ್ ನೆಗಳಗುಳಿ,ಮಂಗಳೂರು, ಕವಿ, ಸಾಹಿತಿ,ಗುಣಾಜೆ ರಾಮಚಂದ್ರ ಭಟ್, ಶೋಭಾ ಬನಶಂಕರಿ ಬೆಳಗಾವಿ, ಗೋಪಾಲಕೃಷ್ಣ ಶಾಸ್ತ್ರಿ, ಸುಭಾಷ್ ಪೆರ್ಲ, ಸುಬ್ಬಣ್ಣ ಶೆಟ್ಟಿ ಕೂಡ್ಲು, ಅಶ್ವಿನಿ ಕೋಡಿಬೈಲ್ ಸುಳ್ಯ, ಶಾರದಾ ಬಿ, ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ, ಮಹೇಶ್ ಆರ್ ನಾಯಕ್, ಆನಂದ ರೈ ಅಡ್ಕಸ್ಥಳ, ಶಿವಪ್ರಸಾದ ಕೊಕ್ಕಡ, ವೀರಭದ್ರೇಗೌಡ ಮೈಸೂರು, ಪುರುಷೋತ್ತಮ ಎಂ.ನಾಯ್ಕ್, ಕೆ. ಗುರುಪ್ರಸಾದ ಕೋಟೆಕಣ, ಶ್ರೀಕಾಂತ ಕಾಸರಗೋಡು, ಜಯ ಮಣಿಯಂವಾರೆ ಉಪಸ್ಥಿತರಿದ್ದರು. ಕೇರಳ ಮತ್ತು ಕರ್ನಾಟಕ ರಾಜ್ಯದಿಂದ ಸುಮಾರು 400 ಕವಿ,ಸಾಹಿತಿ, ಬರಹಗಾರರು, ಲೇಖಕರು, ಮಾಧ್ಯಮದವರು,ಕಲಾವಿದರು, ಭಾಗವಹಿಸಿದ್ದರು.
PHOTO: ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿದರು.





