ಮಧೂರು : ಸೀಮೆಯ ದೇಗುಲಗಳಲ್ಲಿ ಒಂದಾಗಿರುವ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ಶ್ರೀಮಹಾಗಣಪತಿಗೆ ಮೂಡಪ್ಪ ಸೇವೆಯ ಸಂಭ್ರಮದ ಜತೆಗೆ ಮಹಾಮೂಡಪ್ಪ ಸೇವೆಯ ದ್ರವ್ಯಗಳನ್ನು ಗುರುವಾರ ದೇವಸ್ಥಾನಕ್ಕೆ ಶ್ರದ್ಧಾ ಭಕ್ತಿಯಿಂದ ಮಂಗಳಘೋಷದೊಂದಿಗೆ ತರಲಾಯಿತು.
ಕಾರ್ಯಕ್ರಮಕ್ಕೂ ಮೊದಲು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಶ್ರೀದೇವರ ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿಗಳ ಅಷ್ಟದ್ರವ್ಯ ಮಹಾಗಣಪತಿ ಯಾಗ ಮತ್ತು ಶ್ರೀ ಮಹಾಗಣಪತಿ ಮಂತ್ರಾನುಷ್ಠಾನನದೊಂದಿಗೆ ಮೂಡಪ್ಪ ಸೇವಾ ಸಮರ್ಪಣೆಯ ಸಿದ್ಧತೆಗಳು ಆರಂಭಗೊಂಡಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೆ ಉತ್ಸವ ಬಲಿ, ಶ್ರೀ ಮಹಾಗಣಪತಿ ಮಂತ್ರನುಷ್ಠಾನ ನಡೆಯಿತು.
ಅರಿಕೊಟ್ಟಿಗೆ ಮುಹೂರ್ತ, ಅಪೂಪ ಸಮರ್ಪಣೆ:
ಏ.2ರಿಂದ 5ರ ವರೆಗೆ ಸತತ ನಾಲ್ಕು ದಿನಗಳ ಕಾಲ 128ಕಾಯಿಗಳ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮತ್ತು ಶ್ರೀ ಮಹಾಗಣಪತಿ ಮಂತ್ರಾನುಷ್ಠಾನದೊಂದಿಗೆ ಉತ್ಸವ ನಡೆದುಬರಲಿದೆ. 5ರಂದು ಬೆಳಿಗ್ಗೆ 9ಕ್ಕೆ ಮಹಾ ಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ ನಡೆಯಲಿದೆ. ಬಳಿಕ ಅಪ್ಪ ತಯಾರಿ ಪ್ರಾರಂಭವಾಗಲಿದೆ.
ಅಂದು ಬೆಳಗ್ಗೆ ದೇವರಿಗೆ ಕಲಶಾಭಿಷೇಕ ಮಾಡಿ ಪೂಜಿಸಿ, ಪ್ರಾರ್ಥಿಸಿದ ಬಳಿಕ ತಂತ್ರಿವರ್ಯರು ಅರಿಕೊಟ್ಟಿಗೆ ಪ್ರವೇಶಿಸುವರು. ಅಲ್ಲಿ ದ್ವಿಜರಿಗೆ ಮುಹೂರ್ತದಾನ ದಕ್ಷಿಣೆಗಳನ್ನು ಕೊಟ್ಟು , ಅಪ್ಪಣೆ ಪಡೆದು , ದೇವ ನಂದಾದೀಪದಿಂದ ತಂದ ದೀಪದಿಂದ ಅಗ್ನಿ ಪ್ರತಿಷ್ಠೆ ಮಾಡಲಾಗುವುದು. ಇದರಲ್ಲಿ ಅಪ್ಪದ ಹೊಸ ಕಾವಲಿಯನ್ನಿಟ್ಟು ಗಣಪತಿ ಪ್ರಾರ್ಥನೆಯೊಂದಿಗೆ ಮುಖ್ಯ ಕಾರ್ಮಿಕತ್ವದ ತಂತ್ರಿಗಳು ಆರಂಭದ ಅಪ್ಪ ಹೊಯ್ಯುವರು. ಬಳಿಕ ಅಪ್ಪ ತಯಾರಿಗೆ ನಿಯುಕ್ತರಾದ ಜನರ ಮುಖ್ಯಸ್ಥನಿಗೆ ಆಚಾರ್ಯರು ಅಪ್ಪ ತಯಾರಿಯ ಅಧಿಕಾರ ಹಸ್ತಾಂತರಿಸುವರು. ಹೀಗೆ ತಯಾರಾಗುವ ಸಾವಿರಾರು ಅಪ್ಪಗಳು ಆ ರಾತ್ರಿಯೇ ಗಣಪತಿ ದೇವರನ್ನು ಮುಚ್ಚಿಕೊಳ್ಳಲಿವೆ. ಅಂದು ಸಂಜೆ ಉತ್ಸವ ಬಲಿ ನಡೆದು, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ ನಡೆದು, ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ ಜರುಗಿದ ಬಳಿಕ ರಾತ್ರಿ 10ಕ್ಕೆ ಶ್ರೀಭೂತಬಲಿ ಮಹಾಮೂಡಪ್ಪಾಧಿವಾಸ ಹೋಮ ನಡೆಯಲಿದೆ.ಬಳಿಕ ಶ್ರೀಮಹಾಗಣಪತಿ ದೇವರಿಗೆ ಮೂಡಪ್ಪ ಸಮರ್ಪಣೆಯಾಗಲಿದೆ.
ರಾತ್ರಿ ಬೆಡಿ ಉತ್ಸವ ಪೂರೈಸಿ ಅತ್ತಾಳ ಪೂಜೆಯಲ್ಲಿ ಆಚಾರ್ಯರಿಂದ ಶ್ರೀಮಹಾರಂಗಪೂಜೆಯ ಅಂಗವಾಗಿ ಒಂದು ಮುಡಿ ಅಕ್ಕಿಯ ನೈವೇದ್ಯ ಮದನಂತೇಶ್ವರನಿಗೆ ಸಮರ್ಪಿಸಲಾಗುವುದು. ಒಂದು ಮುಡಿ ಅಕ್ಕಿಯ ಹವಿಸ್ಸನ್ನು ಪೂಜಿಸಿ ಶ್ರೀಮಹಾಗಣಪತಿ ದೇವರ ಮುಂಭಾಗದಲ್ಲಿ ಕಬ್ಬಿನಿಂದ ಬೇಲಿ ರಚಿಸಿ ಅದರಲ್ಲಿ 12ಮುಡಿ ಅಕ್ಕಿಯ ಬೆಲ್ಲದ ಅಪೂಪವನ್ನು ಹಾಗೂ ಒಂದು ಮುಡಿ ಅಕ್ಕಿಯ ಪಚ್ಚಪ್ಪವನ್ನು ತುಂಬಲಾಗುವುದು. ಅದಕ್ಕೆ 128ಕಾಯಿ ಅಷ್ಟದ್ರವ್ಯ, ಮೋದಕ, ಜೇನು, ತುಪ್ಪ, ಸಕ್ಕರೆ ಮಿಶ್ರಣ ಮಾಡಿದ ಬಳಿಕ ಪರ್ವತಾಕಾರದ ಅಪ್ಪದ ರಾಶಿಯನ್ನು ಗಣಪತಿಯ ಬಾಯಿಯ ವರೆಗೂ ಅಲಂಕರಿಸಿ ಕಲ್ಪೋಕ್ತ ಪೂಜೆ ಮಾಡಿ ಪ್ರಾರ್ಥಿಸಲಾಗುವುದು.
ಜತೆಗೆ ಶಿವ ಸನ್ನಿಧಿಯಲ್ಲೂ ಮೂರು ಮುಡಿ ಅಕ್ಕಿಯ ಗುಡಾಪೂಪ, 9ಸೇರಿನ ಪಚ್ಚಪ್ಪ ಅರ್ಪಿಸಲಾಗುತ್ತದೆ. ಮೊದಲು ಮದನಂತೇಶ್ವರ ಸನ್ನಿಧಿಯಲ್ಲಿ ಪ್ರಾರ್ಥಿಸಿ ದ್ವಾರಬಂಧನ ಮಾಡಿ, ಗಣಪತಿಯ ಗುಡಿಯ ದ್ವಾರ ಬಂಧಿಸಲಾಗುತ್ತದೆ. ಮರುದಿನ ಸೂರ್ಯೋದಯಕ್ಕೆ ಹತ್ತು ಸಮಸ್ತರ ಮುಂದೆ ಪ್ರಾರ್ಥಿಸಿ, ಕವಾಟೋದ್ಘಾಟನೆ ನಡೆಯಲಿದ್ದು, ಬಳಿಕ ಭಕ್ತ ಜನರಿಗೆ ಅಪ್ಪ ಪ್ರಸಾದ ವಿತರಣೆಯಾಗಲಿದೆ.
PHOTOS:ಮಹಾಮೂಡಪ್ಪ ಸೇವೆಯ ದ್ರವ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಮಂಗಳಘೋಷದೊಂದಿಗೆ ದೇವಸ್ಥಾನಕ್ಕೆ ತರಲಾಯಿತು.
: ಮಹಾಮೂಡಪ್ಪ ಸೇವೆಗೆ ಸಲ್ಲಿಕೆಯಾಗಿರುವ ಅಷ್ಟದ್ರವ್ಯ ಸಹಿತ ಸುವಸ್ತುಗಳು






