ಕಾಸರಗೋಡು: ನಗರದ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಗಾಂಜಾ ವಿತರಿಸಿದ ಪ್ರಕರಣದ ಆರೋಪಿ, ಕಳನಾಡು ನಿವಾಸಿ ಕೆ.ಕೆ ಸಮೀರ್(34)ಎಂಬಾತನನ್ನು ಮೇಲ್ಪರಂಬ ಠಾಣೆ ಪೊಲೀಸರು 'ಕಾಪಾ'ಕಾಯ್ದೆಯನ್ವಯ ಬಂಧಿಸಿದ್ದಾರೆ. ಬಂಧಿತನನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಶಾಲಾ ಬೀಳ್ಕೊಡುಗೆ ಸಮಾರಂಭದಲ್ಲಿ ಗಾಂಜಾ ಸೇವಿಸಿದ್ದ ಮೂವರು ವಿದ್ಯಾರ್ಥಿಗಳನ್ನು ಸೆರೆಹಿಡಿದು ವಿಚಾರಣೆಗೊಳಪಡಿಸಿದಾಗ ಸಮೀರ್ ಬಗ್ಗೆ ಮಾಹಿತಿ ನೀಡಿದ್ದರು. ಸಮೀರ್ ಮೆನೆಗ ದಾಳಿ ನಡೆಸಿ ಬಂಧಿಸಲು ಮುಂದಾಗುತ್ತಿದ್ದಂತೆ ಅಲ್ಲಿಂದ ಆತ ಪರಾರಿಯಾಗಲು ಯತ್ನಿಸಿದರೂ, ನಂತರ ಪೊಲೀಸ್ ಕಾರ್ಯಾಚರಣೆಯಿಂದ ಬಂಧಿಸಲಾಗಿದೆ. ಕಾಸರಗೋಡು, ಮೇಲ್ಪರಂಬ, ಹೊಸದುರ್ಗ ಹಾಗೂ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರಿಂದ ಈತ ಗಾಂಜಾ ಸಹಿತ ವಿವಿಧ ಮಾದಕ ದ್ರವ್ಯ ವಿತರಿಸುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾದಕದ್ರವ್ಯ ಮಾರಾಟ ನಡೆಸುತ್ತಿರುವ ಈತನ ಮೇಲೆ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಮಾದಕ ದ್ರವ್ಯ ವಿತರಣೆ, ಹಲ್ಲೆ ಮುಂತಾದ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




