ಮಂಜೇಶ್ವರ : ಮಂಜೇಶ್ವರ ಪೊಲೀಸ್ ಠಾಣೆಯ ಕುಂಜತ್ತೂರು ಅಡ್ಕಪಳ್ಳದ ಮಾಣಿಗುಡ್ಡೆಯ ಬಾವಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮುಲ್ಕಿ ಕೊಳ್ನಾಡು ನಿವಾಸಿ, ಮಂಗಳೂರಿನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿರುವ ಮಹಮ್ಮದ್ ಶೆರೀಪ್(52)ಮೃತಪಟ್ಟವರು. ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು, ಮೃತದೇಹ ಉನ್ನತ ಶವಮಹಜರಿಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಅಡ್ಕಪಳ್ಳದ ಪಾಳುಬಾವಿ ಸನಿಹ ಆಟೋರಿಕ್ಷಾವೊಂದು ಬಹಳ ಹೊತ್ತಿನಿಂದ ನಿಂತಿರುವುದನ್ನು ಕಂಡು ಈ ಹಾದಿಯಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಬಾವಿಯೊಳಗೆ ಮೃತದೇಹ ಕಂಡು ಮಾಹಿತಿ ನೀಡಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಆಟೋರಿಕ್ಷಾದ ನಂಬರ್ ತಪಾಸಣೆ ನಡೆಸಿದಾಗ ಮೃತ ವ್ಯಕ್ತಿಯ ಮಾಹಿತಿ ಲಭಿಸಿತ್ತು. ಆಟೋರಿಕ್ಷಾದ ಸನಿಹ ಚಪ್ಪಲಿ ಹಾಗೂ ರಕ್ತದ ಕಲೆ ಕಂಡುಬಂದಿದ್ದು, ಇದೊಂದು ಕೊಲೆಯಾಗಿರಬೇಕೆಂದು ಸಂಶಯ ವ್ಯಕ್ತವಾಗಿತ್ತು. ಏ. 9ರಂದು ಮಹಮ್ಮದ್ ಶೆರೀಪ್ ಅವರ ಆಟೋರಿಕ್ಷಾವನ್ನು ಮೂರು ಮಂದಿಯ ತಂಡವೊಂದು ಪಣಂಬೂರಿನಿಂದ ಬಾಡಿಗೆಗೆ ಕರೆದೊಯ್ದಿದ್ದು, ನಂತರ ಇವರ ಮೊಬೈಲ್ ಸ್ವಿಚ್‍ಆಫ್ ಆಗಿತ್ತು. ಈ ಬಗ್ಗೆ ಮಹಮ್ಮದ್ ಶರೀಫ್ ಮನೆಯವರು ನೀಡಿದ ದೂರಿನನ್ವಯ ಮುಲ್ಕಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಮಹಮ್ಮದ್ ಶೆರೀಪ್ ಸಂಬಂಧಿಕರು ಸ್ಥಳಕ್ಕಾಗಮಿಸಿ ಆಟೋರಿಕ್ಷಾದ ಗುರುತು ಪತ್ತೆಹಚ್ಚಿದ್ದು, ಶ್ವಾನದಳ, ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ ನಂತರ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹ ಮೇಲಕ್ಕೆತ್ತಲಾಗಿತ್ತು. ಕಾಸರಗೋಡು ಡಿವೈಎಸ್‍ಪಿ ಸಿ.ಕೆ ಸುನಿಲ್, ಇನ್ಸ್‍ಪೆಕ್ಟರ್ ಅನೂಪ್ ನೇತೃತ್ವದ ಪೊಲೀಸರ ತಂಡ ನಡೆಸಿದ ತಪಾಸಣೆಯಿಂದ ಮೃತದೇಹದಲ್ಲಿ ಗಾಯದ ಗುರುತು ಪತ್ತೆಹಚ್ಚಿರುವುದರಿಂದ ಇದೊಂದು ಕೊಲೆ ಕೃತ್ಯವಾಗಿರಬೇಕೆಂಬ ಶಂಕೆಗೆ ಪುಷ್ಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಸವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮನೆಯವರು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಮಹಮ್ಮದ್ ಶೆರೀಪ್ ಅವರು ದಿ. ಇದಿನಬ್ಬ-ಬೀಫಾತಿಮ್ಮ ದಂಪತಿ ಪುತ್ರ.





