ಕಾಸರಗೋಡು: ಒಂದು ವರ್ಷದ ಮಗು ಮಲಗಿ ನಿದ್ರಿಸುತ್ತಿದ್ದ ಮನೆ ಬೆಡ್ ರೂಮಿನ ಬಾಗಿಲ ಚಿಲಕ ತನ್ನಿಂತಾನೆ ಲಾಕ್ ಆಗಿ, ನಂತರ ಮಗುವನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿ ಹೊರತಂದ ಘಟನೆ ಕಾಸರಗೋಡು ತಾಯಲಂಗಾಡಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಮಹಮ್ಮದ್ ಸನಾಹ್ ಎಂಬವರ ಪತ್ನಿ ಗುರುವಾರ ಸಂಜೆ ಮಗುವನ್ನು ಕೊಠಡಿಯೊಳಗೆ ಮಲಗಿಸಿ ಬಾಗಿಲು ಮುಚ್ಚಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಅಲ್ಪ ಹೊತ್ತಿನ ಬಳಿಕ ಬಾಗಿಲು ತೆರೆಯಲು ಮುಂದಾದಾಗ ಒಳಗಿಂದ ಚಿಲಕ ಲಾಕ್ ಆದ ಸ್ಥಿತಿಯಲ್ಲಿತ್ತು. ತೆರೆಯಲು ಪ್ರಯತ್ನಿಸಿದರೂ, ಸಾಧ್ಯವಾಗದಿದ್ದಾಗ ಮನೆಯವರು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಡೋರ್ ಬ್ರೇಕರ್ ಬಳಸಿ ಬಾಗಿಲು ಒಡೆದು ಕೊಠಡಿಯಿಂದ ಮಗುವನ್ನು ರಕ್ಷಿಸಿದ್ದಾರೆ.




