ಶ್ರೀನಗರ: ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯ ರಾಮನಗರದಲ್ಲಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಉಗ್ರರ ನಡುವೆ ಬುಧವಾರ ಗುಂಡಿನ ಚಕಮಕಿ ನಡೆದಿದೆ. ಸ್ಥಳದಲ್ಲಿ 2 -3 ಮಂದಿ ಭಯೋತ್ಪಾದಕರು ಅಡಗಿರುವ ಸಾಧ್ಯತೆಗಳಿದ್ದು, ಅವರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಮನಗರದ ಜೋಫರ್ ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಉಗ್ರರು ಎದುರಾಗುತ್ತಿದ್ದಂತೆಯೇ ಗುಂಡಿನ ಚಕಮಕಿ ಶುರುವಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಕಳೆದ ವಾರ ಕಠುವಾ ಜಿಲ್ಲೆಯ ಬಿಲ್ಲವಾರ್ ಎಂಬಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಉಗ್ರರು ಅಡಗಿರುವ ಮಾಹಿತಿ ಸಿಕ್ಕಿತ್ತು. ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ಉಗ್ರರು ಪರಾರಿಯಾಗಿದ್ದರು. ಇದರಿಂದಾಗಿ ಈಗ ನಡೆಯುತ್ತಿರುವ ಕಾರ್ಯಾಚರಣೆ ಮಹತ್ವ ಪಡೆದಿದೆ.




