ತಿರುವನಂತಪುರಂ: ಮಕ್ಕಳ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಹರಿಸಬೇಕು ಮತ್ತು ಈ ಉದ್ದೇಶಕ್ಕಾಗಿ ಅವರ ಓದು ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವೆ ಡಾ.ಆರ್.ಬಿಂದು ಹೇಳಿದರು.
ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ನವೀಕರಿಸಿದ ಸಭಾಂಗಣ ಮತ್ತು ಬೇಸಿಗೆ ಶಾಲೆಯನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಸಾಮಥ್ರ್ಯಗಳನ್ನು ಬೆಳೆಸುವುದು ಮುಖ್ಯ. ಮಕ್ಕಳು ಮುಕ್ತ ಹೃದಯಿಗಳಾಗಿ ಬೆಳೆಯಬೇಕು. ಮಕ್ಕಳಲ್ಲಿ ಹಿಂಸಾತ್ಮಕ ಆಲೋಚನೆಗಳನ್ನು ಬೆಳೆಸುವ ಸಂದರ್ಭಗಳನ್ನು ತಪ್ಪಿಸಬೇಕು. ಮಕ್ಕಳು ಪರಸ್ಪರ ಸಹಕರಿಸುತ್ತಾ, ಒಟ್ಟಿಗೆ ಕಲಿಯುತ್ತಾ, ಪುಸ್ತಕಗಳನ್ನು ಓದುತ್ತಾ ಮತ್ತು ಆಟವಾಡುತ್ತಾ ಬೆಳೆಯಬೇಕು. ಪೋಷಕರು ತಮ್ಮ ಮಕ್ಕಳನ್ನು ಪೋನ್ ಪರದೆಗಳಿಂದ ದೂರವಿಟ್ಟು ಕಥೆಗಳು, ಕವಿತೆಗಳು ಮತ್ತು ಆಟಗಳಿಗೆ ಕೇಂದ್ರೀಕರಿಸಲು ಜಾಗರೂಕರಾಗಿರಬೇಕು. ಬೇಸಿಗೆ ಶಾಲೆಗಳ ವೈವಿಧ್ಯಮಯ ವಿಷಯವನ್ನು ಇದಕ್ಕೆ ಸಹಾಯಕವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಇಂದಿನ ಸಮಾಜದಲ್ಲಿ ಮಕ್ಕಳು ಮನೆಯಲ್ಲಿಯೇ ಒಂಟಿಯಾಗಿರುತ್ತಾರೆ. ಮಕ್ಕಳು ಪರದೆಯ ಮೂಲಕ ಮಾತ್ರ ವಿಷಯಗಳನ್ನು ಅನುಭವಿಸಿದಾಗ ಅವರು ಭಾವನಾತ್ಮಕ ನಿಕಟತೆ ಮತ್ತು ಉಷ್ಣತೆಯನ್ನು ಕಳೆದುಕೊಳ್ಳುತ್ತಾರೆ. ಇಂತಹ ಆಧುನಿಕ ಸನ್ನಿವೇಶಗಳು ಮಕ್ಕಳಲ್ಲಿ ಮಾನಸಿಕ ಸಂಘರ್ಷಗಳನ್ನು ಉಂಟುಮಾಡುತ್ತವೆ. ಮಕ್ಕಳನ್ನು ಸರಿಯಾಗಿ ರೂಪಿಸುವಲ್ಲಿ ಸಮಾಜವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹಿಂಸೆ ಮತ್ತು ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಕ್ರಮ ಕೈಗೊಳ್ಳುವಲ್ಲಿ ಕೇರಳವು ಜಗತ್ತಿಗೆ ಮಾದರಿಯಾಗುವಂತಹ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸಚಿವರು ಹೇಳಿದರು.
ರಾಜ್ಯ ಗ್ರಂಥಪಾಲಕಿ ಶೋಭನಾ ಪಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರಾದ ಡಾ. ಜಾರ್ಜ್ ಒನಕ್ಕೂರ್, ಡಾ. ಕೆ. ಎಸ್. ರವಿಕುಮಾರ್, ಚಿತ್ರಕಲಾವಿದ ಸಜಿತಾ ಆರ್. ಶಂಕರ್ ಮತ್ತು ಇತರರು ಭಾಗವಹಿಸಿದ್ದರು. ಬೇಸಿಗೆ ಶಾಲೆಯು ಮೇ 9 ರವರೆಗೆ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ನಡೆಯಲಿದೆ.






