ಕಾಸರಗೋಡು: ಏಪ್ರಿಲ್ 21 ರಿಂದ 27 ರವರೆಗೆ ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿರುವ ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವವನ್ನು ಜನಪರ ಉತ್ಸವವನ್ನಾಗಿ ಆಚರಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಮತ್ತು ವನ್ಯಜೀವಿ ಖಾತೆ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲೆಯ ಕಾಲಿಕಡವು ಮೈದಾನದಲ್ಲಿ ಏ. 21ರಂದು ಆಯೋಜಿಸಿರುವ ಎಡರಂಗಸರ್ಕಾರದ ನಾಲ್ಕನೇ ವರ್ಷಾಚರನೆ ಯಶಸ್ವಿಗಾಗಿ ಪಡುವಲಂ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರಚನಾ ಸಭೆ ಉದ್ಘಾಟಿಸಿ ಸಿದ್ಧತೆಗಳ ಅವಲೋಕನ ನಡೆಸಿ ಮಾತನಾಡಿದರು.
ರಾಜ್ಯ ಸರ್ಕಾರದ ಒಂಬತ್ತು ವರ್ಷಗಳ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳನ್ನು ನೇರವಾಗಿ ಕಾಣಲು ಕುಟುಂಬ ಸದಸ್ಯರು ವಿವಿಧ ಇಲಾಖೆಗಳ ಮಳಿಗೆಗಳಿಗೆ ಭೇಟಿ ನೀಡಲಿದ್ದಾರೆ. 'ಮೈ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ'ವನ್ನು ಆಐಓಜಿಸಲಾಗಿದ್ದು, ಎಲ್ಲಾ ವಲಯಗಳಲ್ಲಿ ಜನಪರ ಸರ್ಕಾರದ ಸಾಧನೆಗಳ ದೃಶ್ಯ ಪ್ರದರ್ಶನವಾಗಲಿದೆ. ಸಾರ್ವಜನಿಕರಿಗೆ ನೇರ ಸೇವೆ ಒದಗಿಸಲು ಮಳಿಗೆಗಳ ಜತೆಗೆ ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಕುಟುಂಬಶ್ರೀ ಮತ್ತು ಇತರ ಸಂಘಟನೆಗಳಿಂದ ಆಹಾರ ಮೇಳ ಮತ್ತು ಕೃಷಿ ಇಲಾಖೆಯಿಂದ ಕೃಷಿ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ನಡೆಯಲಿದೆ. ಉತ್ಸವದಲ್ಲಿ ಕಾಸರಗೋಡಿನ ವಿಶಿಷ್ಟ ಕಲಾ ಮತ್ತು ಸಾಂಸ್ಕøತಿಕ ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ವಿಚಾರ ಸಂಕಿರಣ ಆಯೋಜಿಸಲಾಗುವುದು. ವಿವಿಧ ವಿಷಯಗಳ ಕುರಿತು ಚರ್ಚೆ, ಸಂವಾದ ನಡೆಯಲಿದೆ.
ಇದೇ ಮೊದಲ ಬಾರಿಗೆ ಸರ್ಕಾರದ ವಾರ್ಷಿಕ ಆಚರಣೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆಎಂದು ಹೇಳಿದರು. ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯಾರ, ನೀಲೇಶ್ವರಂ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತ, ವಲಿಯಪರಂಬ ಗ್ರಾಪಂ ಅಧ್ಯಕ್ಷ ವಿ.ವಿ. ಸಜೀವನ್, ಪಿಲಿಕೋಡು ಗ್ರಾಪಂ ಅಧ್ಯಕ್ಷ ಪಿ.ಪಿ. ಪ್ರಸನ್ನಕುಮಾರಿ, ಚೆರುವತ್ತೂರು ಗ್ರಾಪಂ ಅಧ್ಯಕ್ಷ ಸಿ.ವಿ. ಪ್ರಮೀಳಾ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಕೆ. ಲಕ್ಷ್ಮಿ ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಉಪಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ ಅಖಿಲ್ ಸ್ವಾಗತಿಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ವಂದಿಸಿದರು.





