ಕಾಸರಗೋಡು: ಕೋಟಿಕುಳಂ-ತೃಕ್ಕನ್ನಾಡ್ ರೈಲ್ವೆ ಹಳಿಯ ಉದುಮ ರೈಲ್ವೆಗೇಟ್ ಸನಿಹ ಹಾಗೂ ಹೊಸದುರ್ಗದ ಕಾಸರಗೋಡು ಡೌನ್‍ಲೈನ್ ರೈಲ್ವೆ ಹಳಿಯಲ್ಲಿ ಕಲ್ಲು ಹಾಗೂ ಮರದ ತುಂಡುಗಳನ್ನಿರಿಸಿ ಬುಡಮೇಲುಕೃತ್ಯಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರ್ಮುಳ ಇರತ್ತೂರ್ ನಿವಾಸಿ ಜೋಜಿ ಥಾಮಸ್(29)ಎಂಬಾತನನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏ. 17ರಂದು ಬುಡಮೇಲು ಕೃತ್ಯಕ್ಕೆ ಯತ್ನಿಸಲಾಗಿತ್ತು. ನಿಜಾಮುದ್ದೀನ್ ಸೂಪರ್‍ಫಾಸ್ಟ್ ರೈಲು ಸಾಗುವ ಅಲ್ಪ ಸಮಯದ ಮೊದಲು ಹಳಿಯಲ್ಲಿ ಕಲ್ಲು ಹಾಗೂ ಮರದ ತುಂಡುಗಳನ್ನಿರಿಸಿರುವ ಬಗ್ಗೆ ರೈಲ್ವೆ ಸೆಕ್ಷನ್ ಇಂಜಿನಿಯರ್ ಬೇಕಲ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇದೇ ಸಂದರ್ಭ ರೈಲ್ವೆ ಹಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಊರವರು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದು, ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹಳಿಯಲ್ಲಿ ಕಲ್ಲು ಹಾಗೂ ಮರದ ತುಂಡುಗಳನ್ನಿರಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದನು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೇಕಲ ಡಿವೈಎಸ್‍ಪಿ ವಿ.ವಿ ಮನೋಜ್ ಹಗೂ ಠಾಣಾಧಿಕಾರಿ ಡಾ. ಅಪರ್ಣಾ ಐಪಿಎಸ್ ಮೇಲ್ನೋಟದಲ್ಲಿ ತನಿಖೆ ನಡೆಯುತ್ತಿದೆ.




