ಕಾಸರಗೋಡು: ಹಸಿವು ರಹಿತ ಬದುಕು ಸಾಧಿಸಲು ಅಗತ್ಯವಿರುವಷ್ಟು ಗೌರವಧನವನ್ನು ನೀಡಬೇಕು ಮತ್ತು ನಿವೃತ್ತಿ ಭತ್ಯೆಯನ್ನು ಘೋಷಿಸಬೇಕೆಂದು ಒತ್ತಾಯಿಸಿ ಕೇರಳ ಆಶಾ ಆರೋಗ್ಯ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರ 78 ದಿನಗಳ ಹಗಲು-ರಾತ್ರಿ ಮುಷ್ಕರ ಮತ್ತು 40 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ನಂತರವೂ ಸರ್ಕಾರವು ತನ್ನ ನಿಲುವನ್ನು ಬದಲಾಯಿಸದಿರುವುದರಿಂದ ಮೇ 1ರಂದು ರಜ್ಯ ಸೆಕ್ರೆಟೇರಿಯೆಟ್ ಎದುರು ಪ್ರತಿಭಟನಾ ಮೆರವಣಿಗೆ ಹಾಗೂ 5ರಿಂದ ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗುವುದು ಎಂದು ಕೇರಳ ಅಶಾ ಹೆಲ್ತ್ ವರ್ಕರ್ಸ್ ಅಸೋಸಿಯೇಶನ್(ಕೆಎಎಚ್‍ಡಬ್ಲ್ಯೂಎ)ಉಪಾಧ್ಯಕ್ಷೆ ಎಸ್. ಮಿನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಜೀವಿಸಲು ಅಗತ್ಯವಿರುವ ಗೌರವಧನ ನೀಡದೆ ರಾಜ್ಯ ಸರ್ಕಾರವು ಹಿಂದೆಂದೂ ಕಾಣದ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ. ಸಮಾಜದ ಅತ್ಯಂತ ಬಡ ಮಹಿಳಾ ಕಾರ್ಮಿಕರ ಈ ಹೋರಾಟವನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಸರ್ಕಾರ ಇವರ ಕನಿಷ್ಠ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಆಶಾ ಕಾರ್ಮಿಕರ ಮುಷ್ಕರವು ಸಣ್ಣ ಪ್ರಮಾಣದಲ್ಲಿಯೂ ಯಶಸ್ವಿಯಾಗದಂತೆ ತಡೆಯುವಲ್ಲಿ ಬಂಡವಾಳಶಾಹಿಗಳು ಪ್ರಯತ್ನಿಸುತ್ತಿದ್ದಾರೆ. ಅಶಾ ಕರ್ಯಕರ್ತೆಯರ ಹೋರಾಟದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವುದರ ಜತೆಗೆ ಸರ್ಕಾರಿ ಪೋಷಿತ ಕಾರ್ಮಿಕ ಸಂಘಟನೆ ಮುಖಂಡರೊಬ್ಬರು ಹೋರಾಟದಲ್ಲಿ ಪಾಲ್ಗೊಂಡಿರುವ ಆಶಾ ಕಾರ್ಯಕತೆಯರ ಬಗ್ಗೆ ಅಶ್ಲೀಲ ಪದ ಪ್ರಯೋಗ ಬಳಸಿರುವುದು ರಾಜ್ಯದ ಮಹಿಳೆಯರಿಗೆ ಎಸಗಿದ ಅಪಚಾರವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಈ ಹೋರಾಟವನ್ನು ಬೆಂಬಲಿಸುವ ನಾಗರಿಕ ಸಮಾಜ ವಿಶೇಷವಾಗಿ, ಸಾಮಾಜಿಕ-ಸಾಂಸ್ಕøತಿಕ ಕಾರ್ಯಕರ್ತರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು, ಈ ಹೋರಾಟವನ್ನು ರಾಜ್ಯಾದ್ಯಂತ ವ್ಯಾಪಿಸುವ ರೀತಿಯಲ್ಲಿ ಹೋರಟ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹಗಲು-ರಾತ್ರಿ ಹೋರಾಟ ಆರಂಭಿಸಲಾಗುವುದು. ಮೇ 5ರಂದು ಕಾಸರಗೋಡಿನಿಂದ ಪ್ರಾರಂಭಿಸಿ, ಜೂನ್ 17 ರಂದು ತಿರುವನಂತಪುರ ತಲುಪಲಿರುವ ಈ ಪ್ರತಿಭಟನಾ ಮೆರವಣಿಗೆ, ರಾಜ್ಯದ ಮಹಿಳಾ ಕಾರ್ಮಿಕರ ಚಳುವಳಿಗಳಲ್ಲಿ ಅಭೂತಪೂರ್ವವಾಗಿ ಮೂಡಿಬರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಮಿಷಾ, ಶೀಲಾ.ಕೆ.ಜೆ, ರೋಸ್ ಲೀ ಜಾನ್, ಅಕ್ಕಮ್ಮ ಪೆರ್ಲ ಉಪಸ್ಥಿತರಿದ್ದರು.




