ನವದೆಹಲಿ: ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಶೇ 26ರಷ್ಟು ಸುಂಕ ವಿಧಿಸಿದ್ದರೂ, ತಿರುಗೇಟು ನೀಡುವ ಉದ್ದೇಶದಿಂದ ಆ ರಾಷ್ಟ್ರದ ಮೇಲೆ ಭಾರಿ ಸುಂಕ ಹೇರುವ ಯೋಜನೆ ಭಾರತ ಹೊಂದಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ದುಬಾರಿ ಪ್ರತಿ ಸುಂಕಕ್ಕೆ ಸಂಬಂಧಿಸಿ ಉಭಯ ದೇಶಗಳ ನಡುವೆ ಮಾತುಕತೆಗಳು ಮುಂದುವರಿದಿವೆ. ಹೀಗಾಗಿ, ಈ ಹಂತದಲ್ಲಿ ಪ್ರತೀಕಾರ ರೂಪದಲ್ಲಿ ಸುಂಕ ಹೆಚ್ಚಿಸುವ ಯೋಜನೆ ಕೇಂದ್ರದ ಮುಂದಿಲ್ಲ ಎಂದಿದ್ದಾರೆ.
'ಪ್ರತಿ ಸುಂಕ ಒಳಗೊಂಡಿರದ ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿ ಪಾಲುದಾರ ದೇಶಗಳಿಗೆ ಕೆಲ ವಿನಾಯಿತಿ ನೀಡುವ ಕೆಲ ನಿಬಂಧನೆಗಳು ಟ್ರಂಪ್ ಆದೇಶದಲ್ಲಿ ಇರುವ ಕುರಿತು ಕೇಂದ್ರ ಸರ್ಕಾರ ಪರಿಶೀಲಿಸಿದೆ. ಇದು, ಕೂಡ ಕೇಂದ್ರದ ಇಂತಹ ನಡೆಗೆ ಮತ್ತೊಂದು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತವು, ಪ್ರತಿ ಸುಂಕದ ಹೊರೆ ತಗ್ಗಿಸುವುದಕ್ಕೆ ಸಂಬಂಧಿಸಿ ಅಮೆರಿಕದೊಂದಿಗೆ ಮಾತುಕತೆ ಆರಂಭಿಸಿರುವ ಮೊದಲ ದೇಶವಾಗಿದೆ. ಪ್ರತಿ ಸುಂಕದಿಂದ ನಲುಗಿರುವ ಚೀನಾ, ವಿಯೆಟ್ನಾಂ, ಇಂಡೊನೇಷ್ಯಾ ಸೇರಿದಂತೆ ಏಷ್ಯಾದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಸ್ಥಿತಿ ಉತ್ತಮವಾಗಿಯೇ ಇರುವುದು ಅನುಕೂಲಕರ ಅಂಶ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.




