ನವದೆಹಲಿ: ಪಹಲ್ಗಾಮ್‌ನ ಭಯೋತ್ಪಾದಕರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತವು ತನ್ನ ಆಯ್ಕೆಗಳನ್ನು ಪರಿಶೀಲಿಸುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಪೂರ್ಣ ಬೆಂಬಲವಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಸಿ ಪಕ್ಷದ ಹಿರಿಯ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಭಯೋತ್ಪಾದಕರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಬಗ್ಗೆ ಮಾತನಾಡಿದ ಅವರು ಇದು ರಾಷ್ಟ್ರೀಯ ಏಕತೆ ವಿಚಾರ, ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಬೆಂಬಲ ಇದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.
ಪಾಕಿಸ್ತಾನದ ಬಳಿ ಅಣ್ವಸ್ತ್ರಗಳಿವೆ ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಎಂದಿಗೂ, ಯಾರ ವಿರುದ್ಧವು ಮೊದಲು ದಾಳಿ ಮಾಡಿಲ್ಲ, ಅವರು (ಪಾಕಿಸ್ತಾನ) ಮಾಡಿದ್ದಾರೆ, ಈಗ ಅವರಿಗೆ ಪ್ರತ್ಯುತ್ತರ ಕೊಡುತ್ತಿದ್ದೇವೆ ಎಂದರು. ಅವರು ಅಣ್ವಸ್ತ್ರಗಳನ್ನು ಬಳಸುವ ತನಕ ನಾವು ಬಳಕೆ ಮಾಡಲ್ಲ ಎಂದರು. ಅವು ಅವರಿಗಿಂತಲೂ ಮೊದಲು ನಮ್ಮ ಬಳಿಯೇ ಇವೆ ಎಂದರು. ದೇವರು ಅಂತಹ ಪರಿಸ್ಥಿತಿ ಉಂಟಾಗಲು ಬಿಡಬಾರದು ಎಂದು ಹೇಳಿದರು.
ಉಗ್ರರ ದಮನಕ್ಕೆ ದಾಳಿಯ ಮಾದರಿ, ಗುರಿ ಹಾಗೂ ಸಮಯ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ ಇದೆ ಎಂದು ಮೋದಿ ಅವರು ಸೇನೆಗಳ ಮುಖ್ಯಸ್ಥರಿಗೆ ಸಂದೇಶ ನೀಡಿದ್ದಾರೆ.




