ಪೆರ್ಲ: ಅಮಲುಪದಾರ್ಥ ಸೇವಿಸಿ ಅಪಾಯಕರ ರೀತಿಯಲ್ಲಿ ಲಾರಿ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಪೆರ್ಲ ಫೇಟೆಯಲ್ಲಿ ಶುಕ್ರವಾರ ಘಟನೆ ನಡೆದಿದೆ. ಅಪಾಯಕಾರಿಯಾಗಿ ಸಂಚರಿಸುತ್ತಿದ್ದ ಲಾರಿಯನ್ನು ಏಕಾಏಕಿ ನಿಲ್ಲಿಸಲು ಯತ್ನಿಸುತ್ತಿದ್ದಂತೆ ಲಾರಿ ರಸ್ತೆ ಅಂಚಿಗೆ ಸಾಗಿದೆ. ಸಾವರಿಸಿಕೊಂಡು ನಿಂತ ಲಾರಿಯಿಂದ ಚಾಲಕ, ರಸ್ತೆಗೆ ಬಿದ್ದಿದ್ದಾನೆ.
ಲಾರಿಯ ಹಿಂದಿನಿಂದ ಶಿಕ್ಷಕರೊಬ್ಬರು ಕಾರಿನಲ್ಲಿ ಸಂಚರಿಸುತ್ತಿದ್ದು, ಚಾಲಕನ ಕುಡಿತದ ನಾಗಾಲೋಟಕ್ಕೆ ಬೆದರಿ ತಮ್ಮ ಕಾರನ್ನು ರಸ್ತೆ ಪಾಶ್ರ್ವಕ್ಕೆ ನಿಲ್ಲಿಸಿರುವುದರಿಂದ ಅಪಾಯದಿಂದ ಪಾರಾಗಿದ್ದರು. ಕಾರಿನ ಹಿಂದಿನಿಂದ ಆಟೋ ರಿಕ್ಷವೂ ಆಗಮಿಸುತ್ತಿತ್ತು. ಕಂಠಪೂರ್ತಿ ಅಮಲುಪದಾರ್ಥ ಸೇವಿಸಿದ್ದ ಲಾರಿ ಚಾಲಕಗೆ ಎದ್ದು ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದನೆನ್ನಲಾಗಿದೆ. ತಕ್ಷಣ ಬದಿಯಡ್ಕ ಠಾಣೆಗೆ ಕರೆಮಾಡಿ ಈತನನ್ನು ಪೊಲೀಸರಿಗೊಪ್ಪಿಸಲಾಗಿದೆ.
ಪೆರ್ಲ ಆಸುಪಾಸಿನ ಹಲವು ಕೆಂಪುಕಲ್ಲು ಕ್ವಾರಿಗಳಿಂದ ಕಲ್ಲು ಸಾಗಾಟಕ್ಕೆ ಇತರ ರಾಜ್ಯಗಳಿಂದ ಹಲವಾರು ಲಾರಿಗಳು ಆಗಮಿಸುತ್ತಿದ್ದು, ಪೆರ್ಲ-ಪೂವನಡ್ಕ ರಸ್ತೆಯಲ್ಲಿ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಸಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ.





