ಉಪ್ಪಳ: ಇತ್ತೀಚೆಗೆ ಕಾಶ್ಮೀರದ ಪಹಲ್ಲಾಗಮ್ ನಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರ ಭೀಕರ ಹಿಂದೂ ನರಮೇಧವನ್ನು ಖಂಡಿಸಲು ಮತ್ತು ಹುತಾತ್ಮರಿಗೆ ನುಡಿನಮನ ಸಲ್ಲಿಸುವ ವಿಶೇಷ ವಿರಾಟ್ ಹಿಂದೂ ಜಾಗೃತ ಸಮಾವೇಶದ ಸಿದ್ಧತಾ ಸಭೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಿತು. ಸಭೆಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಂ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹಾಗೂ ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಉಪಸ್ಥಿತರಿದ್ದು ಮಾರ್ಗದರ್ಶನಗೈದರು.
ವಿರಾಟ್ ಹಿಂದೂ ಜಾಗೃತ ಸಮಾವೇಶವೂ ಮೇ. 4 ರಂದು ಭಾನುವಾರ ಅಪರಾಹ್ನಾ 4 ರಿಂದ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವಂಗಣವಾದ ಐಲ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮವು ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಂ ಎಡನೀರು ಮಠ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಸಂಯುಕ್ತ ಆಶ್ರಯದಲ್ಲಿ ಮತ್ತು ಜಿಲ್ಲೆಯ ಎಲ್ಲಾ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ನಡೆಯಲಿದೆ. ಕಾಸರಗೋಡು ತಾಲೂಕು ಮತ್ತು ಮಂಜೇಶ್ವರ ತಾಲೂಕನ್ನು ಕೇಂದ್ರೀಕರಿಸಿ ನಡೆಯುವ ಈ ವಿರಾಟ್ ಹಿಂದೂ ಜಾಗೃತ ಸಮಾವೇಶವನ್ನು ಒಂದು ಅಭೂತಪೂರ್ವ ಕಾರ್ಯಕ್ರಮವನ್ನಾಗಿ ಮಾಡಲು ತೀರ್ಮಾನಿಸಲಾಯಿತು. ಈ ಸಮಾವೇಶದಲ್ಲಿ ಎರಡು ತಾಲೂಕುಗಳ ಎಲ್ಲಾ ಪಂಚಾಯತಿಗಳು ಸರ್ವ ಹಿಂದೂ ಬಾಂಧವರು, ತಾಯಿಯಂದಿರು, ಮಕ್ಕಳೊಂದಿಗೆ ಎಲ್ಲರೂ ಭಾಗವಹಿಸಿ ಜಾಗೃತ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಯಿತು.
ದೇಶದಲ್ಲಿ ಭಯೋತ್ಪಾದಕರ ಮೂಲೋತ್ಪಾಟನೆ ಮಾಡಲು ಸರ್ಕಾರಗಳು ಕಟ್ಟಿಬದ್ಧರಾಗಬೇಕು ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸರ್ಕಾರವನ್ನು ಆಗ್ರಹಿಸಲು ತೀರ್ಮಾನ ಮಾಡಲಾಯಿತು. ಈ ಕಾರ್ಯಕ್ರಮದ ಯಶಸ್ವಿಗೆ ಸರ್ವರು ಸಹಕರಿಸಲು ಕೋರಲಾಗಿದೆ.




