ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುರತ್ತಿಕುಂಡು ಎಂಬಲ್ಲಿ ಮಾದಕದ್ರವ್ಯ ಸೇವಿಸಿ ದಾಂಧಲೆಯಲ್ಲಿ ತೊಡಗಿದ್ದಾರೆಂಬ ಮಾಹಿತಿಯನ್ವಯ ತನಿಖೆಗೆ ತೆರಳಿದ್ದ ಪೊಲೀಸ್ ಕಾನ್‍ಸ್ಟೇಬಲ್ ಹಾಗೂ ಯುವಕನೊಬ್ಬನಿಗೆ ಸಹೋದರರ ತಂಡವೊಂದು ಇರಿದು ಗಾಯಗೊಳಿಸಿದೆ.
ಶನಿವಾರ ರಾತ್ರಿ ಘಟನೆ ನಡೆದಿದ್ದು, ಬೇಡಡ್ಕ ಠಾಣೆ ಸಿವಿಲ್ ಪೊಲೀಸ್ ಅಧಿಕಾರಿ ಸೂರಜ್ ಹಾಗೂ ಕುರತ್ತಿಕುಂಡು ನಿವಾಸಿ ಸನೀಶ್ ಗಾಯಗೊಂಡವರು. ಗಾಯಾಳು ಸನೀಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಕೋಟ್ಟಾಯಂ ನಿವಾಸಿಗಳಾದ ವಿಷ್ಣು ಹಾಗೂ ಜಿಷ್ಣು ಎಂಬವರ ವಿರುದ್ಧ ಹತ್ಯಾಯತ್ನ ಸೇರಿದಂತೆ ವಿವಿಧ ಕಾಯ್ದೆ ಅನ್ವಯ ನೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶನಿವಾರ ತಡರಾತ್ರಿ ಇಲ್ಲಿನ ಶಿಕ್ಷಕ ದಂಪತಿಯ ಮನೆಗೆ ಆಗಮಿಸಿದ್ದ ವಿಷ್ಣು ಹಾಗೂ ಜಿಷ್ಣು ದಾಂಧಲೆ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಬೇಡಡ್ಕ ಠಾಣೆ ಎಸ್.ಐ ಪಿ. ರಘುನಾಥ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸುತ್ತಿದ್ದಂತೆ ಜಿಷ್ಣು ಹಾಗೂ ವಿಷ್ಣು ಕತ್ತಿ ಬೀಸಿಕೊಂಡು ಪೊಲೀಸರತ್ತ ಆಗಮಿಸಿದ್ದು, ಇದರಿಂದ ಸನೀಶ್ ಅವರ ಹೊಟ್ಟೆ ಹಾಗೂ ಸೂರಜ್ ಅವರ ದವಡೆ ಭಾಗಕ್ಕೆ ಗಾಯಗಳುಂಟಾಗಿದೆ. ಆರೋಪಿಗಳಿಬ್ಬರೂ ಪರಾರಿಯಾಗಿದ್ದು, ಇವರು ಬಳಸಿದ್ದ ಕತ್ತಿಯನ್ನು ಅನತಿ ದೂರದಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. ಮದ್ಯದೊಂದಿಗೆ ಇತರ ಮಾದಕ ವಸ್ತುಗಳನ್ನೂ ಇಬ್ಬರೂ ಬಳಸಿದ್ದಾರೆನ್ನಲಾಗಿದೆ. ಕೋಟ್ಟಾಯಂ ನಿವಾಸಿಗಳಾದ ವಿಷ್ಣು ಹಾಗೂ ಜಿಷ್ಣು ಕಳೆದ ಹಲವು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದರು.




