ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಕೀಕಾನದಲ್ಲಿರುವ ಧ್ವನಿ ಸಾರ್ವಜನಿಕ ಗ್ರಂಥಾಲಯದ ಪರಿಸರದಲ್ಲಿ ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯ ಸಿ.ಸುಬ್ರಾಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಅಧ್ಯಕ್ಷತೆ ವಹಿಸಿದರು. ನಿವೃತ್ತ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್.ಎನ್. ಅವರು `ಕನ್ನಡಕ್ಕೆ ಹೊಸದುರ್ಗದ ಕೊಡುಗೆ'ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.ಹೊಸದುರ್ಗ ತಾಲೂಕಿನಲ್ಲಿ ಕನ್ನಡ ಮನೆಮಾತಿನವರು ತುಂಬಾ ಸಂಖ್ಯೆಯಲ್ಲಿದ್ದಾರೆ. ಮನೆಮಾತು ಕನ್ನಡವಲ್ಲದ ಕನ್ನಡಿಗರೂ ಸಾಕಷ್ಟಿದ್ದಾರೆ. ಎಲ್ಲಾ ಕನ್ನಡಿಗರೂ ಒಂದಾಗಿ ಹೊದುರ್ಗದಲ್ಲಿ ಕನ್ನಡವನ್ನು ಉಳಿಸಲು ಕೈಜೋಡಿಸಬೇಕೆಂದು ಅವರು ಹೇಳಿದರು.
ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿ ಅರವಿಂದ ಕೆ., ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಕೆ. ಮುಖ್ಯ ಅತಿಥಿಗಳಾಗಿದ್ದರು. ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಎಂ, ನಿವೃತ್ತ ಪ್ರಾಧ್ಯಾಪಕ ಚಂದ್ರಹಾಸ ಪಿ, ರಾಜೇಶ್ ಕೀಕಾನ ಉಪಸ್ಥಿತರಿದ್ದರು. ಉಪನ್ಯಾಸದ ಬಳಿಕ ಹೊಸದುರ್ಗದ ಕನ್ನಡಿಗರ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಬಾಲಕೃಷ್ಣ ಕೆ, ದಿವಾಕರ ಕೆ.ಪಿ, ನಾಗರಾಜ ಎಚ್.ಪಿ. ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು. ಪ್ರಜ್ಞಾ ಪ್ರಕಾಶ್ ಪ್ರಾರ್ಥನೆ ಹಾಡಿದರು.
ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕಲ್ಲಕಟ್ಟ ಶಾಲಾ ಶಿಕ್ಷಕಿ ನಿರೀಕ್ಷಾ ವಂದಿಸಿದರು.

%20(1).jpg)
