ಕಾಸರಗೋಡು: ಮಾನಸಿಕ ಅಸೌಖ್ಯ ಹೊಂದಿದ್ದ 14ರ ಹರೆಯದ ಬಾಲಕಿಯನ್ನು ಆಟೋರಿಕ್ಷಾದಲ್ಲಿ ಕರೆದೊಯ್ದು, ಲೈಂಗಿಕ ಕಿರುಕುಳ ನೀಡಿದ ಅಪರಾಧಿ, ಚೆಂಗಳ ಪಾಣಾಲಂ ನಿವಾಸಿ ಉಸ್ಮಾನ್ ಅಲಿಯಾಸ್ ಉಕ್ಕಂಪೆಟ್ಟಿ ಉಸ್ಮಾನ್(63)ಎಂಬಾತನಿಗೆ ಕಾಸರಗೋಡು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ನ್ಯಾಯಾಧೀಶ ರಾಮುರಮೇಶ್ಚಂದ್ರ ಬಾನು ಅವರು ವಿವಿಧ ಸೆಕ್ಷನ್‍ಗಳ ಅನ್ವಯ 167ವರ್ಷಗಳ ಜೈಲು ಶಿಕ್ಷೆ ಮತ್ತು 5.50ಲಕ್ಷ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ 22ತಿಂಗಳ ಹೆಚ್ಚಿನ ಜೈಲುಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ. ಆರೋಪಿಗೆ ಒಂದು ಸೆಕ್ಷನ್‍ನಲ್ಲಿ ಗರಿಷ್ಠ 40 ವರ್ಷಗಳ ಕಠಿಣ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂ. ಸೇರಿದಂತೆ ಈ ಶಿಕ್ಷೆ ವಿಧಿಸಲಾಗಿದೆ.
ಮಧೂರು ಪಂಚಾಯಿತಿ ವ್ಯಾಪ್ತಿಯ ಬಾಲಕಿಯನ್ನು ಆಹಾರ ತೆಗೆದುಕೊಡುವ ಭರವಸೆಯೊಂದಿಗೆ ತಾನು ಚಲಾಯಿಸುತ್ತಿದ್ದ ಆಟೋರಿಕ್ಷಾದಲ್ಲಿ ಚೆರ್ಕಳದ ಬೇವಿಂಜೆ ಎಂಬಲ್ಲಿ ಕುರುಚಲು ಕಾಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿತ್ತು. ಅಂದಿನ ಇನ್ಸ್‍ಪೆಕ್ಟರ್ ಭಾನುಮತಿ ಸಿ. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ಸಲ್ಲಿಸಿದ್ದರು. ಆರೋಪಿ, ವಿವಿಧ ಸಎಕ್ಷನ್‍ಗಳಿಗೆ ಸಂಬಂಧಿಸಿ ಒಟ್ಟಿಗೆ ಶಿಕ್ಷೆ ಅನುಭವಿಸಿದರೆ ಸಾಕೆಂದು ನ್ಯಾಯಾಲಯ ತಿಳಿಸಿದೆ.




