ಬದಿಯಡ್ಕ: ಆತ್ಮ, ಇಂದ್ರಿಯ, ಮನಸ್ಸುಗಳ ಪ್ರಸನ್ನತೆಗೆ ಯೋಗಾಸನಗಳು ಅತ್ಯುತ್ತಮ ಔಷಧಿಯಾಗಿದೆ. ಯುಕ್ತಾಹಾರ, ಯುಕ್ತ ಚೇಷ್ಠೆಗಳೇ ಮೊದಲಾದ ಅನುಕ್ರಮಗಳನ್ನು ಪಾಲಿಸುವ ಮೂಲಕ ಬದುಕನ್ನು ಸುಸೂತ್ರವಾಗಿ ಮುನ್ನಡೆಸಬಹುದು ಎಂದು ಮೆಕ್ಸಿಕೊದ ಯೋಗ ರಾಯಭಾರಿ, ಯೋಗ ಶಿಕ್ಷಕ ವಿಜಯ ಗಣೇಶ್ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಯುವಜನ ಕ್ಷೇಮ ಮತ್ತು ಕ್ರೀಡಾ ಮಂತ್ರಾಲಯದ ಅಂಗೀಕಾರ ಇರುವ 'ಯೋಗಾಸನ ಭಾರತ' ಇದರ ಕೇರಳ ರಾಜ್ಯ ಘಟಕವಾದ ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇóನ್ ಆಫ್ ಕೇರಳದ ಜಿಲ್ಲಾ ಘಟಕವಾದ 'ಯೋಗಾಸನ ಕಾಸರಗೋಡು' ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶನಿವಾರ ಮತ್ತು ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಯೋಗ ಉತ್ಸವ 2025 ಕಾರ್ಯಕ್ರಮದ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರ್ತಮಾನದ ಕಾಲಘಟ್ಟದಲ್ಲಿ ನಮ್ಮ ಆಹಾರ-ವಿಹಾರ, ಚಟುವಟಿಕೆಗಳು ಹಾದಿತಪ್ಪಿರುವುದೇ ಆರೋಗ್ಯ-ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಅಸಮತೋಲನ, ಔಷಧಿಗಳ ನಿರಂತರ ಬಳಕೆ ನಮ್ಮನ್ನು ಘಾಸಿಗೊಳಿಸುಇರುವ ಹೊತ್ತಲ್ಲಿ ದೈನಂದಿನ ಜೀವನದಲ್ಲಿ ಯೋಗಾಸನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಅಗತ್ಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣಾದಿ ಅಷ್ಟಾಂಗ ಯೋಗಗಳು ಪೂರ್ಣ ಪ್ರಮಾಣದ ಯೋಗಗಳಾಗಿದ್ದು, ಆಸನದ ಮೂಲಕ ಇದಕ್ಕೆ ತೊಡಗಿಸಿಕೊಳ್ಳುವಲ್ಲಿ ಮುಂದಡಿ ಇರಿಸಬೇಕು. ಮಕ್ಕಳ ಮೂಲಕ ಇಂತಹದೊಂದು ನವ ಪರಂಪರೆಗೆ ಇಂತಹ ಕಾರ್ಯಕ್ರಮಗಳು ಬೆಂಬಲ ನೀಡುತ್ತದೆ ಎಂದವರು ತಿಳಿಸಿದರು.
ಯೋಗಾಸನ ಕಾಸರಗೋಡು ಅಧ್ಯಕ್ಷ ರವಿಶಂಕರ ನೆಗಲಗುಳಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಬ್ಲಾ.ಪಂ.ಸದಸ್ಯೆ, ಬಿಜೆಪಿ ಜಿಲ್ಲಾಧ್ಯಕ್ಷ ಅಶ್ವಿನಿ ಎಂ.ಎಲ್. ಅವರು ಮಾತನಾಡಿ, ಶ್ರದ್ಧೆ, ಭಕ್ತಿಗಳೊಂದಿಗೆ ಯೋಗಾಸನದ ಹಾದಿಯಲ್ಲಿ ಮುಂದುವರಿದಂತೆಲ್ಲ ಜೀವನ ಒತ್ತಡ ರಹಿತವಾಗಿ ಸಾರ್ಥಕ್ಯದೆಡೆಗೆ ಸಾಗುತ್ತದೆ. ದಿನನಿತ್ಯದ ಯೋಗಾಭ್ಯಾಸ ದೇಹ, ಮನಸ್ಸುಗಳನ್ನು ನಿಯಂತ್ರಣಕ್ಕೊಳಪಡಿಸಿ ಲೌಕಿಕ ಬದುಕಿನ ಸುಗಮತೆಗೆ ಕಾರಣವಾಗುತ್ತದೆ ಎಂದರು.
ಇನ್ನೊಬ್ಬರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಯೋಗಾಸನ ಕೇರಳ ರಾಜ್ಯ ಕಾರ್ಯದರ್ಶಿ ಶಾಮಿಲ್ ಮೋನ್ ಅವರು, ಖೇಲೋ ಇಂದಿಯಾ, ಏಷ್ಯನ್ ಗೇಮ್ಸ್, ಸೋಲೊ ಗೇಮ್ಸ್ ಗಳಲ್ಲಿ ಯೋಗಾಸನ ಸ್ಥಾನ ಪಡೆದು ಯಶಸ್ವಿಯಾಗಿ ಮುಂದುವರಿಯುತ್ತಿದೆ. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಯೋಗವನ್ನು ಕ್ರೀಡೆಯಾಗಿ ಸೇರ್ಪಡೆಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಕೇವಲ ಕ್ರೀಡಾಳುಗಳಷ್ಟೇ ಅಲ್ಲದೆ, ಯೋಗ ತರಬೇತುದಾರರು, ಸ್ಪರ್ಧೆಗಳ ನಿರ್ಣಾಯಕರೇ ಮೊದಲಾದ ಬಹು ಆಯಾಮಗಳಲ್ಲಿ ಬೇಡಿಕೆಗಳು ಹೆಚ್ಚುತ್ತಿವೆ ಎಂದು ತಿಳಿಸಿದರು.
ಬ್ಲಾ.ಪಂ.ಸದಸ್ಯೆ ಅಶ್ವಿನಿ ಮೊಳೆಯಾರ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್, ನೀರ್ಚಾಲು ಹೈಯರ್ ಸೆಕೆಂಡರಿ ಪ್ರಾಂಶುಪಾಲೆ ಜಯಲಕ್ಷ್ಮೀ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ವೈ, ಶಾಲಾ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ರಾಜನ್ ಉಪಸ್ಥಿತರಿದ್ದು ಶುಭಹಾರೈಸಿದರು. ಗಾಯತ್ರೀ ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಗಣೇಶ್ ಪೆರ್ವ ಬೇಳ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಯೋಗೋತ್ಸವದಲ್ಲಿ ಪಾಲ್ಗೊಂಡವರಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.





