ಅಹಮದಾಬಾದ್: ನಗರದಲ್ಲಿ ಅಕ್ರಮವಾಗಿ ನೆಲಸಿದ್ದ 1,000ಕ್ಕೂ ಅಧಿಕ ಬಾಂಗ್ಲಾದೇಶಿಗರನ್ನು ಬಂಧಿಸಿರುವ ಅಹಮದಾಬಾದ್ ಮಹಾನಗರ ಪಾಲಿಕೆಯು, ಚಾಂದೋಲಾ ಕೆರೆ ಪ್ರದೇಶದಲ್ಲಿ ನಿರ್ಮಿಸಿದ್ದ ಅವರ ಮನೆಗಳನ್ನು ನೆಲಸಮಗೊಳಿಸಿದೆ.
'ದೇಶದೊಳಗೆ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶ ಪ್ರಜೆಗಳು ನಡೆಸುತ್ತಿರುವ ದೇಶ ವಿರೋಧಿ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕೈಗೊಂಡಿರುವ ಐತಿಹಾಸಿಕ ಕ್ರಮ ಇದಾಗಿದೆ' ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಇನ್ನೊಂದೆಡೆ, ಸರ್ಕಾರದ ಕ್ರಮದಿಂದ ಬಾಧಿತರಾದ ಕೆಲವರು, ಮನೆಗಳ ಧ್ವಂಸ ಕಾರ್ಯಾಚರಣೆಗೆ ತಡೆ ನೀಡುವಂತೆ ಕೋರಿ ಗುಜರಾತ್ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದಾರೆ.
'ಈ ಪ್ರದೇಶದಲ್ಲಿ ಕಳೆದ 60 ವರ್ಷಗಳಿಂದ ನೆಲಸಿದ್ದೇವೆ. 2010 ಹಾಗೂ 2013ರಲ್ಲಿ ರೂಪಿಸಲಾಗಿರುವ ಪುನರ್ವಸತಿ ಹಾಗೂ ಪುನರ್‌ನಿರ್ಮಾಣ ನೀತಿಯಡಿ ನಮಗೆ ಈ ಸೌಲಭ್ಯಗಳನ್ನು ನೀಡಲಾಗಿದೆ' ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.




