ಕಾಸರಗೋಡು: ನೀತಿ ಆಯೋಗದ ಮಹತ್ವಾಕಾಂಕ್ಷೆಯ ಬ್ಲಾಕ್ ಯೋಜನೆಯಲ್ಲಿ ಅತ್ಯುತ್ತಮ ಸಾಧನೆಗಾಗಿ 2024 ರ ಪ್ರಧಾನ ಮಂತ್ರಿಗಳ ಉತ್ತಮ ಸಾರ್ವಜನಿಕ ಆಡಳಿತದ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ ಸಾರ್ವಜನಿಕ ಸಂಭ್ರಮಾಚರಣೆ ಭಾನುವಾರ ನಡೆಯಿತು.
ನೋಂದಣಿ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಬ್ಲಾಕ್‍ನಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ಸಕಾಲಿಕವಾಗಿ ನಡೆಸಲಾಗಿರುವ ಅಭಿವೃದ್ಧಿ ಕಾರ್ಯಗಳು ಪರಪ್ಪ ಬ್ಲಾಕ್ ಪಂಚಾಯಿತಿಯನ್ನು ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿ ಲಭಿಸುವಂತೆ ಮಾಡಿದೆ. ಅಧಿಕಾರಿಗಳ ಸಮರ್ಪಣೆ ಮತ್ತು ಜವಾಬ್ದಾರಿಯುತ ಚಟುವಟಿಕೆಯ ಜತೆಗೆ ಜನತೆಯ ಸಹಕಾರದಿಂದ ಇದು ಸಾಧ್ಯವಾಗಿರುವುದಾಗಿ ತಿಳಿಸಿದರು.
ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮುಖ್ಯ ಭಾಷಣ ಮಾಡಿದರು. ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಕೆ. ರವಿ, ರಾಜುಕಟ್ಟಕ್ಕಯಂ, ವಕೀಲ ಜೋಸೆಫ್ ಮುಥೋಲಿಲ್, ಗಿರಿಜಾ ಮೋಹನ್, ಶ್ರೀಜಾ ಪಿ, ಪ್ರಸನ್ನ ಪ್ರಸಾದ್, ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ
ವಿ.ಕೆ. ರಾಜನ್, ಎಂ.ಪಿ ಜೋಸೆಫ್, ಎನ್ ಪುಷ್ಪರಾಜನ್, ಸಿ.ಎಂ. ಇಬ್ರಾಹಿಂ, ಕುರಿಯಾಕೋಸ್ ಪ್ಲಾಪರಂಬಿಲ್, ಪಿ.ಟಿ. ನಂದಕುಮಾರ್, ಪ್ರಮೋದ್ ವರ್ಣಂ, ರಾಘವನ್ ಮೊದಲಾದವರು ಉಪಸ್ಥಿತರಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಸ್ವಾಗತಿಸಿದರು ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಸಿ.ಎಂ. ಸುಹಾಸ್ ವಂದಿಸಿದರು.
426 ಬ್ಲಾಕ್ ಪಂಚಾಯಿತಿಗಳ ಪೈಕಿ ಸಾರ್ವಜನಿಕ ಆಡಳಿತ ಶ್ರೇಷ್ಠತೆಯಲ್ಲಿ ಪರಪ್ಪ ಪ್ರಥಮ ಸ್ಥಾನ ಪಡೆದುಕೊಮಡಿತ್ತು. ಆರೋಗ್ಯ, ಸಮಾಜ ಕಲ್ಯಾಣ, ಕೃಷಿ, ಉದ್ಯಮಶೀಲತೆ ಅಭಿವೃದ್ಧಿ ಮತ್ತು ಬುಡಕಟ್ಟು ವಲಯದಲ್ಲಿ ನಡೆಸಲಾಗಿರುವ ಕಲ್ಯಾಣ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆಸಿರುವ ಸಾಧನೆಗಾಗಿ ಪ್ರಶಸ್ತಿ ಲಭ್ಯವಾಗಿದೆ.





