ಕಾಸರಗೋಡು: ಮಳೆಗಾಲಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಕಂದಾಯ ಸಚಿವರ ಸೂಚನೆಯಂತೆ
ಅಗತ್ಯ ಸಮಯದಲ್ಲಿ ಶಿಬಿರಗಳನ್ನು ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ಮಳೆಗಾಲಕ್ಕೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆ ಪ್ರತಿನಿಧಿಗಳು, ಕಾರ್ಯದರ್ಶಿಗಳು ಮತ್ತು ಗ್ರಾಮಾಧಿಕಾರಿಗಳು ಭಾಗವಹಿಸಿದ್ದರು.
ಈ ವರ್ಷ ಮುಂಗಾರುಪೂರ್ವ ಮಳೆ ಬಿರುಸುಪಡೆದುಕೊಂಡಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ
ಮಳೆಗಾಲದಲ್ಲಿ ಮನುಷ್ಯಜೀವಕ್ಕೆ ಅಪಾಯ ಬಾರದಂತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಬೇಕು. ನೆರೆ ಪೀಡಿತ ಪ್ರದೇಶಗಳಲ್ಲಿನ ಕುಟುಂಬಗಳು ಶಿಬಿರಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿರಬೇಕು. ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರು ಸ್ಥಳಾಂತರಗೊಳ್ಳಬೇಕಾದ ಕುಟುಂಬಗಳ ಪಟ್ಟಿ ತಯಾರಿಸಲಾಗಿದೆ.
ಜಿಲ್ಲೆಯ ಹಾಟ್‍ಸ್ಪಾಟ್‍ಗಳಾದ ಬೇವಿಂಜೆ, ವೀರಮಲಕ್ಕುನ್ನು ಮತ್ತು ಮಟ್ಟಲೈಕ್ಕುನ್ನು ಮುಂತಾದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಇತರ ಅಪಘಾತ ಪೀಡಿತ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಶಾಲೆಗಳು ಪುನಾರಂಭಗೊಳ್ಳುವ ಸಂದರ್ಭ, ಶಾಲಾ ಕಟ್ಟಡಗಳು, ಸುತ್ತಮುತ್ತಲಿನ ಪ್ರದೇಶಗಳು ಮತ್ತು ರಸ್ತೆಬದಿಗಳು ಅಪಾಯಗಳಿಂದ ಮುಕ್ತವಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು. ಅಪಘಾತಗಳನ್ನು ತಡೆಗಟ್ಟಲು ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಗ್ರಾಮಾಧಿಕಾರಿಗಳ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಡಿಎಂ ಪಿ.ಅಖಿಲ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್, ಗ್ರಾಪಂ ಅಧ್ಯಕ್ಷರುಗಳಾದ ಪಿ.ಪಿ. ಪ್ರಸನ್ನಕುಮಾರಿ, ಯು.ಪಿ. ತಾಹಿರಾ ಯೂಸುಫ್, ಗಿರಿಜಾ ಮೋಹನ್, ಸಿ.ವಿ. ಪ್ರಮೀಳಾ, ಮುರಳಿ ಪಯ್ಯಂಗಾನಂ, ಎಂ.ಕುಮಾರನ್, ಪಿ.ಶ್ರೀಜಾ, ಟಿ.ಕೆ. ರವಿ, ಎ.ಜಿ.ಅಜಿತಕುಮಾರ್, ಕೆ.ಗೋಪಾಲಕೃಷ್ಣ, ಪಿ.ಲಕ್ಷ್ಮಿ, ಬಿ.ಶಾಂತಾ, ಸುಂದರಿ ಆರ್ ಶೆಟ್ಟಿ, ವಿ.ಕೆ ಬಾವ, ಎ.ಪಿ.ಉಷಾ, ಎಸ್.ಪ್ರೀತಾ, ಖಾದರ್ ಬದರಿಯಾ, ಪಿ.ವಿ. ಮುಹಮ್ಮದ್ ಅಸ್ಲಂ, ಟಿ.ಕೆ. ನಾರಾಯಣನ್, ಗ್ರಾಮ ಅಧಿಕಾರಿಗಳು ಭಾಗವಹಿಸಿದ್ದರು.





