ಕಾಸರಗೋಡು: ಆರ್ಥಿಕವಾಗಿ ಹಿಂದುಳಿದ ಹವ್ಯಕ ಬ್ರಾಹ್ಮಣರಿಗೂ ಸರ್ಕಾರಿ ಸೌಲಭ್ಯ ಮೀಸಲಿರಿಸುವ ಬಗ್ಗೆ ಸರ್ಕಾರ ಅದೇಶ ಹೊರಡಿಸಿದೆ. ದೇಶದಲ್ಲಿ ಸಾಮಾಜಿಕವಾಗಿ ಮುಂದುವರಿದ ಜಾತಿಗಳೆಂದು ಪರಿಗಣಿಸಲ್ಪಟ್ಟ ಬ್ರಾಹ್ಮಣ, ನಂಬೂದಿರಿ, ಎಂಬ್ರಾಂದಿರಿ, ನಾಯರ್, ಶೆಟ್ಟಿ ಮೊದಲಾದ ಪಂಗಡಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು 2021ರಲ್ಲಿಯೇ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಪ್ರಕಾರ ಕೇರಳ ರಾಜ್ಯದಲ್ಲಿರುವ ನಂಬೂದಿರಿ, ಎಂಬ್ರಾಂದಿರಿ,ನಾಯರ್, ಶೆಟ್ಟಿ ಜನಾಂಗದವರನ್ನು ಕೇರಳ ಸರಕಾರವು ತನ್ನ2021ರ ಸರ್ಕಾರಿ ಅದೇಶದಲ್ಲಿ ಒಳಪಡಿಸಿದ್ದರೂ, ಕಾಸರಗೋಡು ಜಿಲ್ಲೆಗಳಲ್ಲಿರುವ ಹವೀಕ, ಹೈವ, ಹವ್ಯಕ ಬ್ರಾಹ್ಮಣರನ್ನು ಕೇರಳ ಸರ್ಕಾರ ತನ್ನ ಆದೇಶದಲ್ಲಿ ಸೇರಿಸಿರಲಿಲ್ಲ.
ಈ ಬಗ್ಗೆ ಹವ್ಯಕ ಅಭ್ಯುದಯ ಚಾರಿಟೇಬಲ್‍ಟ್ರಸ್ಟ್ (ರಿ) ಬದಿಯಡ್ಕ, ಮುಳ್ಳೇರಿಯ ಹವ್ಯಕ ಮಹಾ ಮಂಡಲ, ಕಾಸರಗೋಡು ಹೊಸದುರ್ಗ ಹವ್ಯಕ ಬ್ರಾಹ್ಮಣ ಸಭಾ (ರಿ), ಹವ್ಯಕ ಭಾರತಿ ಸೇವಾ ಟ್ರಸ್ಟ್(ರಿ) ಕಾಸರಗೋಡು, ಗಮಕಕಲಾ ಪರಿಷತ್ತು-ಕೇರಳ ಗಡಿನಾಡ ಘಟಕ ಮೊದಲಾದ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸುವ ಮೂಲಕ ಸರ್ಕಾರದ ಗಮನಸೆಳೆದಿತ್ತು. ಮನವಿಗೆ ಸ್ಪಂದಿಸಿ ಆರ್ಥಿಕವಾಗಿ ಹಿಂದುಳಿದವರ ಅಭ್ಯುದಯಕ್ಕಾಗಿ ಕೇರಳ ಸರ್ಕಾರ ನೇಮಿಸಿದ ಆಯೋಗವೊಂದು 2021ರ ಅ. 26ರಂದು ಕಾಸರಗೋಡಿನ ಸರ್ಕಾರಿ ಅತಿಥಿಗೃಹದಲ್ಲಿ ಸಭೆ ನಡೆಸಿ, ಎಲ್ಲಾ ಸಾಕ್ಷ್ಯಾಧಾರದೊಂದಿಗೆ ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ 2025ನೇ ಏ. 8ರ ಕೇರಳ ಗಜೆಟ್ ನೋಟಿಫಿಕೇಶನ್ 1394 ನೇ ನಂಬರ್ ಮೂಲಕ ಆದೇಶ ಹೊರಡಿಸಿ, ಹವ್ಯಕ ಬ್ರಾಹ್ಮಣರಲ್ಲಿ ಆರ್ಥಿಕವಾಗಿ ಹಿಂದುಳಿದವರು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಶೇ. 10 ಮೀಸಲಾತಿಗೆ ಅರ್ಹರು ಎಂದು ಘೋಷಿಸಿತ್ತು. ಈ ಕುರಿತು ಕೆ. ಗೋಪಾಲಕೃಷ್ಣ ಭಟ್, ಜಯಪ್ರಕಾಶ್ ಪಜಿಲ, ತೆಕ್ಕೆಕೆರೆ ಶಂಕರನಾರಾಯಣ ಭಟ್, ವಿ.ಬಿ.ಕುಳಮರ್ವ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






.jpg)
