ಕಾಸರಗೋಡು: ಬೀದಿ ನಾಯಿಗಳ ಸಂತಾನಾಭಿವೃದ್ಧಿ ಮತ್ತು ದಾಳಿಯನ್ನು ತಡೆಗಟ್ಟಲು ಪ್ರಾಣಿ ಕಲ್ಯಾಣ ಇಲಾಖೆ ಮತ್ತು ತ್ರಿಸ್ತರ ಪಂಚಾಯಿತಿಗಳು ಜಂಟಿಯಾಗಿ ಜಾರಿಗೆ ತಂದಿರುವ ಎನಿಮಲ್ ಬರ್ತ್ ಕಂಟ್ರೋಲ್(ಎಬಿಸಿ)ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ಸಕ್ರಿಯಗೊಳ್ಳಲಾರಂಭಿಸಿದೆ. 2015ರಿಂದ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೆ ಬಂದಿರುವ ಯೋಜನೆ ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ಗಣನೀಯ ಯಶಸ್ಸು ಕಂಡಿದ್ದರೂ, ಕೆಲವೇ ವರ್ಷಗಳಲ್ಲಿ ಯೋಜನೆ ಕಾರ್ಯಚಟುವಟಿಕೆ ಕ್ಷೀಣಿಸುತ್ತಾ ಬರಲಾರಂಭಿಸಿತ್ತು.
ಬೀದಿನಾಯಿಗಳ ಸಂತಾನೋತ್ಪತ್ತಿ ನಿಯಂತ್ರಣ ವ್ಯವಸ್ಥೆಗಳಾದ ಎಬಿಸಿ ಕೇಂದ್ರಗಳನ್ನು 2016 ರಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದು, ಕಾಸರಗೋಡು ರೈಲು ನಿಲ್ದಾಣ ರಸ್ತೆಯ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡದಲ್ಲಿ ಕೇಂದ್ರದ ಮೊದಲ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಕ್ರಿಯೆ ಕಾರ್ಯಾಚರಣೆಯನ್ನು ಬೆಂಗಳೂರು ಮೂಲದ ಮಾನ್ಯತೆ ಪಡೆದ ಏಜನ್ಸಿಯೊಂದಕ್ಕೆ ನೀಡಲಾಗಿತ್ತು. ನಂತರ, ಜಿಲ್ಲೆಯ ಎರಡನೇ ಕೇಂದ್ರವನ್ನು ತ್ರಿಕರಿಪುರದಲ್ಲಿ ಆರಂಭಿಸಲಾಗಿತ್ತು. ಪ್ರಾಣಿ ಕಲ್ಯಾಣ ಇಲಾಖೆಯು 2023 ರ ವೇಳೆಗೆ ಎರಡು ಕೇಂದ್ರಗಳಲ್ಲಿ 11,000 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಎರಡೂ ಎಬಿಸಿ ಕೇಂದ್ರಗಳ ಕಾರ್ಯಾಚರಣೆ ಸ್ಥಗಿತಗೊಳ್ಳುವಂತಾಗಿತ್ತು. ಎಬಿಸಿ ಕೇಂದ್ರ ಆರಂಭಗೊಳ್ಳುವುದಕ್ಕೂ ಮೊದಲು ಬೀದಿನಾಯಿಗಳನ್ನು ಸೆರೆಹಿಡಿದು ವಿಷದ ಚುಚ್ಚುಮದ್ದು ನೀಡುವ ಮೂಲಕ ಕೊಲ್ಲುವ ವ್ಯವಸ್ಥೆಯಿತ್ತು. ಇದಕ್ಕೆ ಪ್ರಾಣಿದಯಾ ಸಂಘ ಹಾಗೂ ನ್ಯಾಯಾಲಯವೂ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೀದಿನಾಯಿಗಳ ಸಂಖ್ಯೆ ಕಡಿತಗೊಳಿಸುವುದರ ಜತೆಗೆ ಬೀದಿನಾಯಿಗಳಿಗೆ ರ್ಯಾಬೀಸ್ ಚುಚ್ಚುಮದ್ದು ನೀಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿತ್ತು.
ಮುಳಿಯಾರಿನಲ್ಲಿ ಕೇಂದ್ರ:
ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಚಟುವಟಿಕೆ ನಡೆಸುತ್ತಿದ್ದ ಎಬಿಸಿ ಕೇಂದ್ರದ ಚಟುವಟಿಕೆ ಕ್ಷೀಣಿಸುತ್ತಿರುವ ಮಧ್ಯೆ, ಮುಳಿಯಾರಿನಲ್ಲಿ ಹೊಸ ಕೇಂದ್ರ ತಲೆಯೆತ್ತಿದೆ. ಪಶುಸಂಗೋಪನಾ ಖಾತೆ ಅಧೀನದಲ್ಲಿ, ತ್ರಿಸ್ತರ ಪಂಚಾಯಿತಿ ಜಂಟಿಯಾಗಿ ಕೇಂದ್ರವನ್ನು ಆರಂಭಿಸಿದೆ. ಬೀದಿನಾಯಿಗಳನ್ನು ಸೆರೆಹಿಡಿದು, ಕೇಂದ್ರಕರ್ಕೆ ತಲುಪಿಸಿ, ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೊಳಪಡಿಸಿ, ನಂತರ ರ್ಯಾಬೀಸ್ ನಿರೋಧಕ ಚುಚ್ಚುಮದ್ದು ನೀಡಲಾಗುತ್ತದೆ. ನಿಗದಿತ ಸಮಯದ ನಂತರ ಸೆರೆಹಿಡಿದು ತರಲಾಗಿರುವ ಅದೇ ಸ್ಥಳದಲ್ಲಿ ಬೀದಿನಾಯಿಗಳನ್ನು ಬಿಡಲಾಗುತ್ತದೆ. ಶಸ್ತ್ರ ಚಿಕಿತ್ಸೆಗೊಳಗಾದ ಬೀದಿನಾಯಿಗಳನ್ನು ಕನಿಷ್ಠ ಐದು ದಿವಸಗಳ ಕಾಲ ಕೇಂದ್ರದಲ್ಲಿರಿಸಿ ಪೋಷಿಸಲಾಗುತ್ತದೆ. ಇವೆಲ್ಲವನ್ನೂ ಕಟ್ಟುನಿಟ್ಟಾದ ಪ್ರಾಣಿ ಕಲ್ಯಾಣ ಕಾನೂನುಗಳನ್ನು ಪಾಲಿಸಿಕೊಂಡೇ ಜಾರಿಗೊಳಿಸಲಾಗುತ್ತದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಜಾರಿಗೆ ತಂದಿರುವ ಸಂತಾನ ಶಕ್ತಿಹರಣ ಶಸ್ತ್ರಕ್ರಿಯೆಯು ವೈಜ್ಞಾನಿಕ ಮತ್ತು ಮಾನವೀಯ ಮಾರ್ಗವಾಗಿದ್ದು, ಈ ಮೂಲಕ ಸಂತಾನೋತ್ಪತ್ತಿ ನಿಯಂತ್ರಿಸುವುದು ಕೇಂದ್ರದ ಗುರಿಯಾಗಿದೆ.
ಮುಳಿಯಾರಿನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಎಬಿಸಿ ಕೇಂದ್ರದಲ್ಲಿ ಒಂದು ಬಾರಿಗೆ 20 ಶ್ವಾನಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಅವಕಾಶವಿದೆ. ನೂರರಷ್ಟು ಶ್ವಾನಗಳನ್ನು ಕೂಡಿಹಾಕಲು ಗೂಡುಗಳನ್ನೂ ಸಜ್ಜುಗೊಳಿಸಲಾಗಿದೆ. ಪ್ರತಿ ನಾಯಿಗೆ ಶಸ್ತ್ರಚಿಕಿತ್ಸೆ ನಡೆಸಲು ಸುಮಾರು 2ಸಾವಿರ ರೂ. ಖರ್ಚು ತಗಲುತ್ತಿದೆ. ಕಾಸರಗೋಡು ಮತ್ತು ತ್ರಿಕ್ಕರಿಪುರದಲ್ಲಿರುವ ಎರಡು ಕೇಂದ್ರಗಳು ಈಗಾಗಲೇ ಚಟುವಟಿಕೆ ಸ್ಥಗಿತಗೊಳಿಸಿದ್ದು, ಮುಳಿಯಾರು ಕೇಂದ್ರವನ್ನು ಇದೇ ಸಾಲಿಗೆ ಸೇರಿಸದಿರುವಂತೆ ನಾಗರಿಕರು ಆಗ್ರಹಿಸಿದ್ದಾರೆ.





