ಕಾಸರಗೋಡು: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಬಾಲಗಂಗಾಧರ ತಿಲಕ್ ಅವರಲ್ಲಿ ಹುಟ್ಟಿಕೊಂಡಿದ್ದ ಗಣೇಶೋತ್ಸವದದ ಆಶಯ ಇಂದು ದೇಶದಲ್ಲಿ ಬಲುದೊಡ್ಡ ಧಾರ್ಮಿಕ ಕ್ರಾಂತಿಗೆ ಕಾರಣವಾಗಿರುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಆ. 27ರಿಂದ ಸೆ. 6ರ ವರೆಗೆ ನಡೆಯಲಿರುವ ಸಾರ್ವಜನಿ ಶ್ರೀ ಗಣೇಶೋತ್ಸವ ಸಪ್ತತಿ ಮಹೋತ್ಸವದ ಸಮಿತಿ ರಚನಾ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ವಕೀಲ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಆಶೀರ್ವಚನ ನೀಡಿ, ಹಿಂದೂ ಸಮಾಜ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಜಾತಿ, ಭಾಷೆ ದೂರವಿರಿಸಿ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಹಿಂದೂ ಸಮಾಜ ಒಗ್ಗಟ್ಟಿನಿಂದ ಎದುರಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಅರೆಸ್ಸೆಸ್ ಕಾಸರಗೋಡು ಜಿಲ್ಲಾ ಸಂಘ ಚಲಕ್ ಪ್ರಭಾಕರನ್ ಮಾಸ್ಟರ್ ಉಪಸ್ಥಿತರಿದ್ದರು. ಸಮಿತಿ ಗೌರವದ್ಯಕ್ಷ ಜಗನ್ನಾಥ್ ಸಮಿತಿ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಛಾಯಾಶ್ರೀ ಮತ್ತು ವೈಭವಿ ಪ್ರಾರ್ಥನೆ ಹಾಡಿದರು. ಕೆ.ಎನ್ ಕಮಲಾಕ್ಷನ್ ಸ್ವಾಗತಿಸಿದರು. ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಮಲಾಕ್ಷ ಬೀರಂತಬೈಲು ವಂದಿಸಿದರು.





