ಕಾಸರಗೊಡು: ಹೊಸದುರ್ಗ ಕೇಂದ್ರಿಕರಿಸಿ ಪ್ರಮಾಣಪತ್ರ ಹಾಗೂ ಇತರ ಸರ್ಟಿಫಿಕೇಟ್ ನಕಲಿಯಾಗಿ ಪೂರೈಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಮೂರು ಮಂದಿನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮಹತ್ವದ ವಿಷಯಗಳು ಬೆಳಕಿಗೆ ಬರಲಾರಂಭಿಸಿದೆ. ಕಾಸರಗೋಡು ಅಲ್ಲದೆ, ಕಣ್ಣೂರು, ಚೆನ್ನೈ, ಮುಂಬೈ ಹಾಗೂ ದುಬೈಯಲ್ಲೂ ಏಜೆಂಟ್‍ಗಳನ್ನು ಹೊಂದಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.
ವಿವಿಧ ವಿಶ್ವ ವಿದ್ಯಾಲಯಗಳ ನಕಲಿ ಸರ್ಟಿಫಿಕೇಟ್, ವಾಹನ ಚಾಲನಾ ಲೈಸನ್ಸ್, ಪಾಸ್‍ಪೋಟ್, ಆಧಾರ್‍ಕಾರ್ಡು ಸೇರಿದಂತೆ ನಾನಾ ದಾಖಲೆಗಳನ್ನು ನಕಲಿಯಾಗಿ ಪೂರೈಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ನಕಲಿ ಎಂಬಿಬಿಎಸ್ ಸರ್ಟಿಫಿಕೇಟ್‍ಗಳನ್ನೂ ಪೂರೈಸಲಾಗಿದ್ದು, ಇದಕ್ಕಾಗಿ 60ಸಾವಿರ ರೂ ವಸೂಲಿಮಾಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಈ ಕೇಂದ್ರ ಕಾರ್ಯಾಚರಿಸುತ್ತ ಬಂದಿದ್ದು, ಹಲವಾರು ಮಂದಿ ಸರ್ಟಿಪಿಕೇಟ್ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೇರಳ-ಕರ್ನಾಟಕದ ಕೆಲವೊಂದು ಆರ್‍ಟಿಓ ಕಚೇರಿಗಳ ಹೆಸರಲ್ಲೂ ಇಲ್ಲಿಂದ ನಕಲಿ ಡ್ರೈವಿಂಗ್ ಸರ್ಟಿಫಿಕೇಸ್ ಪೂರೈಸಲಾಗಿದೆ. ನಕಲಿ ಇಂಜಿನಿಯರಿಂಗ್ ಸರ್ಟಿಫಿಕೇಟ್‍ಗಳಿಗಾಗಿ ಕೆಲವರು ಕೇಂದ್ರವನ್ನು ಸಂಪರ್ಕಿಸಿರುವುದಾಗಿ ಮಾಹಿತಿಯಿದೆ. ಹಣ ನೀಡಿದಲ್ಲಿ ಒಂದು ವಾರದೊಳಗೆ ಸರ್ಟಿಫಿಕೇಟ್ ತಯಾರಿಸಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರಕ್ಕೆ ದಾಳಿ ನಡೆಸಿರುವ ಪೊಲೀಸರು ಕೇಂದ್ರದಿಂದ ಪ್ರಿಂಟರ್, ನಕಲಿ ಮೊಹರುಗಳು, ಸರ್ಟಿಫಿಕೇಟ್ ತಯಾರಿಗಿರುವ ವಿಶೇಷ ಪೇಪರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹೊಸದುಗ್ ಕಡಪ್ಪುರ ನಿವಾಸಿ ಶಿಹಾಬ್(38), ಹೊಸದುರ್ಗ ಕ್ಲಾಯಿಕ್ಕೋಡ್ ನಿವಾಸಿ ಪಿ.ರವೀಂದ್ರನ್(51)ಹಾಗೂ ಹೊಸದುರ್ಗ ಕೊವ್ವಲ್‍ಪಳ್ಳಿ ನಿವಾಸಿ ಸಂತೋಷ್‍ಕುಮಾರ್ ಎಂಬವರನ್ನು ಬಂಧಿಸಲಾಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರಲ್ಲಿ ಕಡಪ್ಪುರ ನಿವಾಸಿ ಶಿಹಾಬ್‍ನನ್ನು 2014ರಲ್ಲಿ ಕೋಯಿಕ್ಕೋಡಿನ ಕರಿಪ್ಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಕಲಿ ಪಾಸ್‍ಪೋರ್ಟ್ ಕೈವಶವಿರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದು, ಕೇಸು ಜಾರಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನೂ ರಚಿಸಲಾಗಿದೆ.




