ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಾಗಗಳಲ್ಲಿನ ಭಯೋತ್ಪಾದಕರ 9 ತಾಣಗಳನ್ನು ಗುರಿಯಾಗಿಸಿ ಭಾರತವು 'ಆಪರೇಷನ್ ಸಿಂದೂರ' ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ನೇತೃತ್ವದಲ್ಲಿ ರಾಷ್ಟ್ರೀಯ ಭದ್ರತಾ ಪರಿಷತ್ತಿನ (ಎನ್‌ಎಸ್‌ಸಿ) ಸಭೆ ನಡೆಯಿತು.
ಸಂಪುಟ ಸಚಿವರು, ಮುಖ್ಯಮಂತ್ರಿಗಳು, ಸೇನೆ, ವಾಯು ಮತ್ತು ನೌಕಾಪಡೆಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
'ವಿಶ್ವಸಂಸ್ಥೆ ಸನ್ನದಿನ 51ನೇ ವಿಧಿ ಪ್ರಕಾರ, ಪಾಕಿಸ್ತಾನಕ್ಕೆ ಆತ್ಮರಕ್ಷಣೆ ಮತ್ತು ಪ್ರತೀಕಾರದ ಹಕ್ಕಿದೆ. ಭಾರತದ ದಾಳಿಯಿಂದ ಮುಗ್ದ ಪಾಕಿಸ್ತಾನಿಗಳು ಜೀವ ಕಳೆದುಕೊಂಡಿದ್ದಾರೆ. ಇದು ಪಾಕಿಸ್ತಾನದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಪ್ರತೀಕಾರದ ಹಕ್ಕನ್ನು ಕಾಯ್ದಿರಿಸಿಕೊಂಡಿದ್ದು, ಸೂಕ್ತ ಸಮಯದಲ್ಲಿ ನಿರ್ಧರಿಸುತ್ತೇವೆ' ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
'ಈ ಸಂಬಂಧ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಪಾಕಿಸ್ತಾನದ ಸೇನೆಗೆ ನೀಡಲಾಗಿದೆ' ಎಂದು ಅದು ಹೇಳಿದೆ.
'ಘೋರ ಅಪರಾಧ': 'ಭಾರತದ ಅಪ್ರಚೋದಿತ ಮತ್ತು ಕಾನೂನುಬಾಹಿರ ಯುದ್ಧ ಕೃತ್ಯದಿಂದ ಉದ್ಭವಿಸಿರುವ ಬೆಳವಣಿಗೆಗಳ ಕುರಿತು ಎನ್‌ಎಸ್‌ಸಿ ಸಭೆಯಲ್ಲಿ ಚರ್ಚಿಸಲಾಯಿತು. ಭಾರತದ ಸೇನೆಯು ಉದ್ದೇಶಪೂರ್ವಕವಾಗಿ ಮಕ್ಕಳು, ಮಹಿಳೆಯರು ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇದು ಘೋರ ಮತ್ತು ನಾಚಿಕೆಗೇಡಿನಿಂದ ಕೂಡಿದ ಅಪರಾಧ. ಅಲ್ಲದೆ ಮಾನವೀಯ ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾದ ನಡೆಯಾಗಿದೆ' ಎಂದು ಪಾಕ್ ಸರ್ಕಾರ ಆರೋಪ ಮಾಡಿದೆ.
'ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ, ನ್ಯಾಯಸಮ್ಮತವಲ್ಲದ ದಾಳಿ ನಡೆಸಿರುವ ಭಾರತದ ಮೇಲೆ ಈ ಕೃತ್ಯದ ಹೊಣೆಯನ್ನು ಹೊರಿಸಿ, ಅಂತರರಾಷ್ಟ್ರೀಯ ಸಮುದಾಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು' ಎಂದು ಪ್ರಕಟಣೆ ತಿಳಿಸಿದೆ.
'ಭಯೋತ್ಪಾದಕ ಶಿಬಿರಗಳು ಎಂಬ ನೆಪದಲ್ಲಿ ಭಾರತವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿದೆ. ಈ ಮೂಲಕ ಮಕ್ಕಳು, ಮಹಿಳೆಯರು ಮತ್ತು ನಾಗರಿಕರ ಮೇಲೆ ದಾಳಿ ನಡೆಸಿದೆ. ಮಸೀದಿ ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ಹಾನಿಯಾಗಿದೆ' ಎಂದು ಅದು ಹೇಳಿದೆ.
ಉದ್ವಿಗ್ನತೆ ಶಮನಕ್ಕೆ ಪಾಕ್ ಸಿದ್ಧ: ರಕ್ಷಣಾ ಸಚಿವ ಆಸಿಫ್
ಭಾರತವೂ ಸಂಘರ್ಷ ಸ್ಥಿತಿಯನ್ನು ತಿಳಿಗೊಳಿಸಲು ಮುಂದಾದರೆ ಪಾಕಿಸ್ತಾನವು ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಸಿದ್ಧವಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬುಧವಾರ ಹೇಳಿದ್ದಾರೆ. ಭಾರತ ಕೈಗೊಂಡ 'ಆಪರೇಷನ್ ಸಿಂದೂರ' ಬೆನ್ನಲ್ಲೇ ಸಚಿವರಿಂದ ಈ ಕುರಿತು ಪ್ರತಿಕ್ರಿಯೆ ಬಂದಿದೆ. ಇತ್ತೀಚೆಗಷ್ಟೇ ಅವರು 'ಭಾರತದಿಂದ ದಾಳಿ ನಡೆದರೆ ಪಾಕಿಸ್ತಾನ ಪ್ರತ್ಯುತ್ತರ ನೀಡಲಿದೆ' ಎಂದು ಹೇಳಿದ್ದರು. ಈ ಕುರಿತು ಬ್ಲೂಮ್‌ಬರ್ಗ್ ಟಿವಿ ವರದಿ ಮಾಡಿತ್ತು. 'ಒಂದು ವೇಳೆ ಭಾರತ ಹಿಂದೆ ಸರಿದರೆ ನಾವು ಖಂಡಿತವಾಗಿಯೂ ಈ ಉದ್ವಿಗ್ನತೆಯನ್ನು ಅಂತ್ಯಗೊಳಿಸುತ್ತೇವೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಎರಡು ದೇಶಗಳ ನಡುವಿನ ಮಾತುಕತೆ ಕುರಿತ ಪ್ರಶ್ನೆಗೆ 'ಅಂತಹ ಯಾವುದೇ ಸಂಭಾವ್ಯ ಮಾತುಕತೆಗಳ ಬಗ್ಗೆ ನನಗೆ ತಿಳಿದಿಲ್ಲ' ಎಂದು ಅವರು ಉತ್ತರಿಸಿದ್ದಾರೆ.
26 ಜನರ ಸಾವು 46 ಜನರಿಗೆ ಗಾಯ
ಭಾರತ ನಡೆಸಿದ ಕ್ಷಿಪಣಿ ದಾಳಿಯಿಂದ 26 ಜನರು ಮೃತಪಟ್ಟಿದ್ದು 46 ಜನರಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನದ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 'ಶತೃಗಳಿಗೆ ಹೇಗೆ ಪ್ರತ್ಯುತ್ತರ ನೀಡಬೇಕು ಎಂಬುದು ನಮ್ಮ ಸೇನಾ ಪಡೆಗಳಿಗೆ ಚೆನ್ನಾಗಿ ಗೊತ್ತಿದೆ' ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಇದೇ ವೇಳೆ ಹೇಳಿದ್ದಾರೆ. 'ಭಾರತ ಕೈಗೊಂಡ ಈ ಯುದ್ಧದ ನಡೆಗೆ ತಕ್ಕ ಉತ್ತರ ನೀಡುವ ಹಕ್ಕು ಪಾಕಿಸ್ತಾನಕ್ಕಿದೆ. ಬಲವಾದ ಪ್ರತ್ಯುತ್ತರವನ್ನೇ ನೀಡಲಾಗುವುದು. ಶತ್ರು ದೇಶದ ದುಷ್ಟ ಉದ್ದೇಶ ಈಡೇರಲು ಬಿಡುವುದಿಲ್ಲ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.




