ಉಪ್ಪಳ: ಯಕ್ಷಗಾನವೆಂದರೆ ಧರ್ಮ ಅಧರ್ಮಗಳ ಸಂಘರ್ಷದ ಕಥೆಯನ್ನು ಜನರಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಯಪಡಿಸುವ ಮಾಧ್ಯಮವಾಗಿದೆ. ಧರ್ಮ ಯಾವುದು, ಅಧರ್ಮ ಯಾವುದು ಎಂದು ಕೇವಲ ಭಾಷಣದ ಮೂಲಕ ಹೇಳುವುದಕ್ಕಿಂತ ಯಕ್ಷಗಾನ ಕಲೆಯ ಮುಖಾಂತರ ತಿಳಿಯಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಹಿಳಾ ಯಕ್ಷಕೂಟ ಹಾಗೂ ಬಾಲಕಲಾವಿದರ ಯಕ್ಷಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು, ಇದರ ಉಭಯ ತರಬೇತಿ ಕೇಂದ್ರದ ದಶಮಾನೋತ್ಸವ ಪ್ರಯುಕ್ತ ಅಡ್ಕ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ಭಾನುವಾರ ನಡೆದ ಸಪ್ತಾಹದ ಸಮಾರೋಪದ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ದೀಪ ಪ್ರಜ್ವಲನೆಗೈದು ಉದ್ಘಾಟಿಸಿದ ಕಲಾವಿದರ ಸಂಘಟನೆಯಾದ ಸವಾಕ್ ನ ರಾಜ್ಯ ಖಜಾಂಜಿ ಉಮೇಶ್ ಎಂ ಸಾಲಿಯಾನ್ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕೇಂದ್ರ, ಗಿಳಿವಿಂಡುವಿನಲ್ಲಿ ಯಕ್ಷಗಾನ ಸಂಬಂಧಿತ ಒಂದು ವರ್ಷದ ತರಬೇತಿಯನ್ನು ಸರ್ಕಾರದ ಮುಖಾಂತರ ನಡೆಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನಿಡಿದರು.
ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ರಂಗ ಕಲಾವಿದ ವಾಸು ಬಾಯಾರ್, ಹವ್ಯಾಸಿ ಯಕ್ಷಗಾನ ಕಲಾವಿದ ಕೆ. ನರಸಿಂಹ ಬಲ್ಲಾಳ್, ಅಜಿತ್ ಭಗವತೀ ನಗರ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷ ಕಯ್ಯಾರು ಪ್ರಶಸ್ತಿ ಹಾಗೂ ಹಿರಿಯ ಪ್ರಸಾದನ ಕಲಾವಿದ ಎಮ್ಮೋಜಿ ಯಾನೆ ಸುಧಾಕರ ರಾವ್ ಇವರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ರಾಜರಾಮ ಬಲ್ಲಾಳ್ ಚಿಪ್ಪಾರು ಅಭಿನಂದನಾ ನುಡಿಗಳನ್ನಾಡಿದರು. ಹಿಮ್ಮೇಳ ಕಲಾವಿದರಾದ ವಾಸುದೇವ ಕಲ್ಲೂರಾಯ, ಹರೀಶ್ ಪಂಜತೊಟ್ಟಿ, ಕೇಶವ ಪ್ರಸಾದ್ ಶಿರಂತಡ್ಕ, ಶಿವರಾಮ ಆಚಾರ್ಯ ಧರ್ಮತಡ್ಕ, ಸತೀಶ್ ಶೆಟ್ಟಿ ಬಾಯಾರ್ ಇವರುಗಳನ್ನು ಸನ್ಮಾನಿಸಲಾಯಿತು. ಮಹಿಳಾ ಯಕ್ಷಕೂಟದ ಸದಸ್ಯೆಯರಾದ ಸುನಿತಾ ಟೀಚರ್ ಶಿರಿಯ, ರೇವತಿ ಟೀಚರ್ ಕುಚ್ಚಿಕಾಡು, ಮೋಹಿನಿ ಕೊಪ್ಪಳ, ಅರುಣಾವತಿ ಪೊನ್ನೆತ್ತೋಡು, ಯಶೋದ ಕುಬಣೂರು, ಯಶವಂತಿ ಅಡ್ಕ, ನಳಿನಾಕ್ಷಿ ಅಡ್ಕ ಹಾಗೂ ಬಾಲಕಲಾವಿದರ ತಂಡದ ಮನೀಶ್ ಆಚಾರ್ಯ ಧರ್ಮತ್ತಡ್ಕ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಂಡದ ನಿರ್ದೇಶಕ ಚಂದ್ರಹಾಸ ಕಯ್ಯಾರ್ ಸ್ವಾಗತಿಸಿ, ಕೃಷ್ಣ ಪೊನ್ನೆತ್ತೋಡು, ಅಶ್ವಿನ್ ಕಯ್ಯಾರು ನಿರೂಪಿಸಿದರು. ಬಳಿಕ ಬಾಲ ಕಲಾವಿದರ ಯಕ್ಷ ಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು ಇವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರಸ್ತುತಿಗೊಂಡಿತು.




.jpg)
.jpg)
