HEALTH TIPS

ಪಾಕಿಸ್ತಾನದ ಪರ ಗೂಢಚರ್ಯೆ ಆರೋಪ: ಸರ್ಕಾರಿ ನೌಕರ ವಶಕ್ಕೆ

ಜ್ಯೆಪುರ/ನವದೆಹಲಿ: ಪಾಕಿಸ್ತಾನದ ಪರವಾಗಿ ಗೂಢಚರ್ಯೆ ನಡೆಸಿದ ಅನುಮಾನದ ಅಡಿಯಲ್ಲಿ ರಾಜಸ್ಥಾನದ ಸರ್ಕಾರಿ ನೌಕರ ಶಕೂರ್ ಖಾನ್‌ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಮಾಜಿ ಸಚಿವ, ಕಾಂಗ್ರೆಸ್ಸಿನ ಸಾಲೇಹ್ ಮೊಹಮ್ಮದ್ ಅವರ ಸಹಾಯಕ ಆಗಿ ಕೆಲಸ ಮಾಡಿದ್ದರು ಎಂದು ಮೂಲಗಳು ಹೇಳಿವೆ.

ಜಿಲ್ಲಾ ಉದ್ಯೋಗ ಕಚೇರಿಯಲ್ಲಿ ಕೆಲಸ ಮಾಡುವ ಶಕೂರ್‌ ಅವರಿಗೆ ಸೇರಿದ ಮೊಬೈಲ್‌ ಫೋನ್‌ನಲ್ಲಿ ಪಾಕಿಸ್ತಾನದ ಜೊತೆ ನಂಟು ಹೊಂದಿರುವ ದೂರವಾಣಿ ಸಂಖ್ಯೆಗಳು ಇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಕೂರ್ ಅವರು ಪಾಕಿಸ್ತಾನದವರ ಜೊತೆ ಸಂಪರ್ಕದಲ್ಲಿದ್ದರು, ಭದ್ರತೆಗೆ ಸಂಬಂಧಿಸಿದ ವಿವರಗಳನ್ನು ಜೈಸಲ್ಮೇರ್‌ನಿಂದ ಹಂಚಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.

ಗುಪ್ತಚರ ಇಲಾಖೆಯ ತಂಡವು ಶಕೂರ್ ಅವರನ್ನು ಬುಧವಾರ ರಾತ್ರಿ ವಶಕ್ಕೆ ಪಡೆದಿದೆ. 'ಶಕೂರ್ ಅವರು ಪಾಕಿಸ್ತಾನದ ಪರವಾಗಿ ಗೂಢಚರ್ಯೆಯಲ್ಲಿ ಭಾಗಿಯಾಗಿರಬಹುದು ಎಂಬ ಮಾಹಿತಿ ಇದೆ. ಈ ಮಾಹಿತಿ ಬಂದ ನಂತರ ಅವರ ಮೇಲೆ ನಿಗಾ ಇರಿಸಲಾಗಿತ್ತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಕೂರ್ ಅವರ ರಾಜಕೀಯ ನಂಟಿನ ಬಗ್ಗೆ ಪ್ರತಿಕ್ರಿಯೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಶಕೂರ್ ಅವರನ್ನು ಕೇಂದ್ರದ ತನಿಖಾ ಸಂಸ್ಥೆಗಳು ಜೈಪುರದಲ್ಲಿ ವಿಚಾರಣೆಗೆ ಗುರಿಪಡಿಸಲಿವೆ.

ಶಕೂರ್ ಬಂಧನ ಕುರಿತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕರು, ವಿಸ್ತೃತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಶಕೂರ್ ಅವರು ಗಡಿ ಪ್ರದೇಶಗಳ ಗೋಪ್ಯ ಮಾಹಿತಿಯನ್ನು ಪಾಕಿಸ್ತಾನದ ಜೊತೆ ಹಂಚಿಕೊಳ್ಳುತ್ತಿದ್ದರು ಎಂದು ಬಿಜೆಪಿ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.

'ಶಕೂರ್ ಅವರು ಪಾಕಿಸ್ತಾನದ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದರು ಎನ್ನಲು ಬಲವಾದ ಸಾಕ್ಷ್ಯ ದೊರೆತಿದೆ' ಎಂದು ಮಾಳವೀಯ ಅವರು ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. ಶಕೂರ್ ಅವರು ಸರ್ಕಾರಕ್ಕೆ ಮಾಹಿತಿ ಒದಗಿಸದೆಯೇ ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಮಾಳವೀಯ ಹೇಳಿದ್ದಾರೆ.

ಬಿಜೆಪಿಯ ಆರೋಪಗಳ ಕುರಿತಾಗಿ ಕಾಂಗ್ರೆಸ್‌ನಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಬಂದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries