HEALTH TIPS

ರಕ್ಷಣಾ ಯೋಜನೆಗಳ ಅನುಷ್ಠಾನ ವಿಳಂಬ: ವಾಯುಪಡೆ ಮುಖ್ಯಸ್ಥರ ಕಳವಳ

ನವದೆಹಲಿ: ರಕ್ಷಣಾ ಯೋಜನೆಗಳ ಅನುಷ್ಠಾನದಲ್ಲಿ ಅತಿಯಾದ ವಿಳಂಬದ ಬಗ್ಗೆ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್‌ ಮಾರ್ಷಲ್ ಅಮರ್ ಪ್ರೀತ್‌ ಸಿಂಗ್‌ ಗುರುವಾರ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಸೇನಾ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಅವರು, 'ರಕ್ಷಣೆಗೆ ಸಂಬಂಧಿಸಿದ ಒಂದೇ ಒಂದು ಯೋಜನೆಯೂ ಸಕಾಲದಲ್ಲಿ ಪೂರ್ಣಗೊಂಡಿಲ್ಲ' ಎಂದು ಅಸಮಾಧಾನ ಹೊರಹಾಕಿದರು.

ಸಿಐಐ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡುವಾಗ ಈ ಹೇಳಿಕೆ ನೀಡಿದ ಅವರು ವಿಳಂಬವಾಗುತ್ತಿರುವ ಯೋಜನೆಗಳ ನಿರ್ದಿಷ್ಟ ವಿವರಗಳನ್ನು ಒದಗಿಸಲಿಲ್ಲ. ಅದೇ ರೀತಿ, ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬವು ಯಾವಾಗಿನಿಂದ ಭಾರತೀಯ ವಾಯುಪಡೆಯ (ಐಎಎಫ್) ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನೂ ಹೇಳಲಿಲ್ಲ.

ಎಚ್‌ಎಎಲ್‌ನಿಂದ ತೇಜಸ್‌ ಲಘು ಯುದ್ಧ ವಿಮಾನಗಳ ಹಸ್ತಾಂತರ ಪ್ರಕ್ರಿಯೆ ಭಾರಿ ವಿಳಂಬವಾಗಿರುವುದಕ್ಕೆ ವಾಯುಪಡೆಯು ಅಸಮಾಧಾನಗೊಂಡಿದೆ.

'ನಿಗದಿತ ಗಡುವಿನ ಒಳಗಾಗಿ ಯೋಜನೆಗಳು ಪೂರ್ಣಗೊಳ್ಳದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ನಾನು ಯೋಚಿಸಿದಂತೆ ಒಂದೇ ಒಂದು ಯೋಜನೆಯೂ ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ. ನಾವು ಈ ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ' ಎಂದು ಹೇಳಿದರು.

'ಒಪ್ಪಂದಕ್ಕೆ ಸಹಿ ಹಾಕುವಾಗ, ಕೆಲವೊಮ್ಮೆ ಅದು ಈಡೇರುವುದಿಲ್ಲ ಎಂಬುದು ನಮಗೆ ಖಚಿತವಾಗಿರುತ್ತದೆ. ಆದರೂ ನಾವು ಮುಂದಿನದ್ದು ಆ ಬಳಿಕ ನೋಡೋಣ ಎಂದು ಒಪ್ಪಂದಕ್ಕೆ ಸಹಿ ಹಾಕುತ್ತೇವೆ. ಇದರಿಂದ ಇಡೀ ಪ್ರಕ್ರಿಯೆಯೇ ಹಾದಿ ತಪ್ಪುತ್ತದೆ. ನಮಗೆ ಸಾಧಿಸಲು ಆಗದೇ ಇರುವುದರ ಭರವಸೆಯನ್ನು ಏಕೆ ನೀಡಬೇಕು' ಎಂದು ಪ್ರಶ್ನಿಸಿದರು.

'ರಾಷ್ಟ್ರೀಯ ವಿಜಯ': ಆಪರೇಷನ್‌ ಸಿಂಧೂರವನ್ನು 'ರಾಷ್ಟ್ರೀಯ ವಿಜಯ' ಎಂದು ಎಂದು ಶ್ಲಾಘಿಸಿದ ಅವರು, ಈ ಕಾರ್ಯಾಚರಣೆಯು ಭಾರತದ ಸಶಸ್ತ್ರ ಪಡೆಗಳಿಗೆ 'ನಾವು ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ನಮಗೆ ಏನೆಲ್ಲಾ ಬೇಕು' ಎಂಬುದರ 'ಸ್ಪಷ್ಟ ಕಲ್ಪನೆ'ಯನ್ನು ನೀಡಿದೆ ಎಂದರು.

'ಈ ಗೆಲುವಿಗೆ ಪ್ರತಿಯೊಬ್ಬ ಭಾರತೀಯರೂ ಕೊಡುಗೆ ನೀಡಿದ್ದಾರೆ ಎಂಬುದು ನನಗೆ ಖಚಿತವಾಗಿದೆ. ಈ ಹಿಂದೆ ಹಲವು ಸಲ ಹೇಳಿದಂತೆ, ಇದು ಎಲ್ಲರೂ ಬಹಳ ವೃತ್ತಿಪರ ರೀತಿಯಲ್ಲಿ ನಿರ್ವಹಿಸಿದ ಕಾರ್ಯಾಚರಣೆಯಾಗಿದೆ. ಎಲ್ಲಾ ಏಜೆನ್ಸಿಗಳು, ಸಶಸ್ತ್ರ ಪಡೆಗಳು ಮತ್ತು ನಾವೆಲ್ಲರೂ ಕೈಜೋಡಿಸಿದ್ದೇವೆ. ಸತ್ಯವು ನಿಮ್ಮೊಂದಿಗಿದ್ದರೆ, ಎಲ್ಲವೂ ತನ್ನಿಂದ ತಾನೇ ನಡೆಯುತ್ತದೆ' ಎಂದು ಹೇಳಿದರು.

Quote - 'ಆಪರೇಷನ್‌ ಸಿಂಧೂರ' ಮೂಲಕ ನಾವು ಸತ್ಯದ ಹಾದಿಯನ್ನು ಹಿಡಿದಿದ್ದೇವೆ. ದೇವರು ಕೂಡಾ ನಮ್ಮೊಂದಿಗಿದ್ದ ಎಂದು ನಾನು ಭಾವಿಸುತ್ತೇನೆ ಏರ್‌ ಚೀಫ್‌ ಮಾರ್ಷಲ್‌ ಎ.ಪಿ.ಸಿಂಗ್ ವಾಯುಪಡೆ ಮುಖ್ಯಸ್ಥ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries