ನವದೆಹಲಿ : ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಕಳೆದ ಏ.22ರಂದು ನಡೆದ ಉಗ್ರರ ದಾಳಿ ಪ್ರಕರಣ ಸಂಬಂಧ ಶಂಕಿತ ಆರು ಉಗ್ರರು ಚೆನ್ನೈನಿಂದ ಶ್ರೀಲಂಕಾಗೆ ವಿಮಾನದ ಮೂಲಕ ತಲುಪಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಕಟ್ಟೆಚ್ಚರವಹಿಸಲಾಗಿದೆ.
ಚೆನ್ನೈನಿಂದ ಬಂದ ವಿಮಾನವನ್ನು ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ ಶೋಧಿಸಲಾಗಿದೆ. ಶಂಕಿತ ಉಗ್ರರನ್ನು ಭಾರತೀಯ ಗುಪ್ತಚರ ಇಲಾಖೆ ಗುರುತಿಸಿದ ನಂತರ ಇಂದು (ಮೇ.3) ಚೆನ್ನೈನಿಂದ ಆಗಮಿಸಿದ್ದ ಶ್ರೀಲಂಕಾ ಏರ್ಲೈನ್ಸ್ ವಿಮಾನವನ್ನು ಬಂಡರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎ) ವಿಶೇಷ ಭದ್ರತಾ ಪಡೆ ತಪಾಸಣೆ ನಡೆಸಿದೆ. ಭಾರತದ ಎಚ್ಚರಿಕೆ ನೀಡಿದ ಬಳಿಕ ಶ್ರೀಲಂಕಾ ಈ ಕ್ರಮಕೈಗೊಂಡಿದ್ದು, ಏರ್ಪೋರ್ಟ್ ಸಂಪೂರ್ಣ ಲಾಕ್ಡೌನ್ ಮಾಡಿದೆ ಎಂದು ತಿಳಿದುಬಂದಿದೆ.
4R-ALS ವಿಮಾನದಿಂದ ನಿರ್ವಹಿಸಲ್ಪಡುವ UL 122 ವಿಮಾನವನ್ನು ಚೆನ್ನೈನಿಂದ ಕೊಲಂಬೊಗೆ ಆಗಮಿಸಿದ ಬಳಿಕ ಭದ್ರತಾ ಸಿಬ್ಬಂದಿ ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದಾರೆಂದು ಶ್ರೀಲಂಕಾ ಏರ್ಲೈನ್ಸ್ ತಿಳಿಸಿದೆ.
ಶ್ರೀಲಂಕನ್ ಏರ್ಲೈನ್ಸ್ ಇಂದು ಬೆಳಿಗ್ಗೆ 11:59 ಗಂಟೆಗೆ ಚೆನ್ನೈನಿಂದ UL 122 ವಿಮಾನವು ಕೊಲಂಬೊಗೆ ತೆರಳಿದೆ. ಈ ವಿಮಾನದಲ್ಲಿ ಶಂಕಿತ ಆರು ಭಯೋತ್ಪಾದಕರು ಇರುವ ಶಂಕೆ ಕುರಿತು ಭದ್ರತಾ ಪಡೆ ತೀವ್ರ ಶೋಧ ನಡೆಸಿದೆ. ಶಂಕಿತ ಉಗ್ರ ಕ್ರಿಮಿಗಳು ಶ್ರೀಲಂಕಾ ಮೂಲಕ ತೆರಳಿ, ಅಲ್ಲಿಂದ ತನ್ನ ಆಪ್ತ ರಾಷ್ಟ್ರ ನರಿಬುದ್ಧಿಯ ಚೀನಾದ ನೆರವು ಪಡೆಯಲು ಪ್ಲ್ಯಾನ್ ಮಾಡಿದ್ದಾರೆಂಬ ಪ್ರಶ್ನೆಗಳು ಉದ್ಭವಿಸಿವೆ.




