ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿರುವ ಕಾಸರಗೋಡು ಪ್ರೆಸ್‍ಕ್ಲಬ್ ಕಚೇರಿಗೆ ತೆರಳುವ ಶೋಚನೀಯಾವಸ್ಥೆಯಲ್ಲಿದ್ದ ರಸ್ತೆಗೆ ಕೊನೆಗೂ ಕಾಯಕಲ್ಪ ಲಭಿಸಿದೆ. ಕಾಸರಗೋಡು ಪ್ರೆಸ್‍ಕ್ಲಬ್, ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ, ವಸತಿ ಸಮುಚ್ಛಯ ಹಾಗೂ ಹಲವು ಮನೆಗಳನ್ನು ಹೊಂದಿರುವ ಈ ಪ್ರದೇಶಕ್ಕೆ ತೆರಳುವ ರಸ್ತೆ ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ, ಸಂಬಂಧಪಟ್ಟವರು ಯಾರೂ ಇತ್ತ ಗಮನಹರಿಸಿರಲಿಲ್ಲ.
ಪ್ರಸಕ್ತ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಊರಾಲುಂಗಾಲ್ ಸೊಸೈಟಿ ಸುಮಾರು ನೂರು ಮೀ. ಉದ್ದ ರಸ್ತೆಯನ್ನು ಡಾಂಬರೀಕರಣ ನಡೆಸಿ ಅಭಿವೃದ್ಧಿಗೊಳಿಸಲು ತೀರ್ಮಾನಿಸಿದ್ದು, ಕಾಮಗಾರಿ ಅರಂಭಿಸಿದೆ. ಕಳೆದ ಕೆಲವು ದಿವಸಗಳಿಂದ ಸುರಿದ ಮಳೆಗೆ ರಸ್ತೆ ಮತ್ತಷ್ಟು ಶಿಥಿಲಾವಸ್ಥೆ ತಲುಪಿದ್ದು, ವಾಹನ ಸಂಚಾರ ದುಸ್ತರವಾಗಿತ್ತು.
ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ರಾಜ್ಯಮಟ್ಟದ ಪತ್ರಕರ್ತರ ಹಾಗೂ ಮಲಬಾರ್ ಪ್ರದೇಶದ ಸ್ಥಳಿಯ ತಂಡಗಳಿಗಾಗಿ ಮೇ 21ರಂದು ಪ್ರೆಸ್ ಕ್ಲಬ್ ವಠಾರದಲ್ಲಿ ಆಯೋಜಿಸಿರುವ ಹಗ್ಗಜಗ್ಗಾಟ ಸ್ಪರ್ಧೆ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗಾಗಿ ಊರಾಲುಂಗಾಲ್ ಸಂಸ್ಥೆಗೆ ಮಾಡಿಕೊಂಡ ಮನವಿಯನ್ವಯ ದುರಸ್ತಿಕಾರ್ಯ ಕೈಗೆತ್ತಿಕೊಳ್ಳಲಾಗಿದೆ.





