ಕಾಸರಗೋಡು: ಕೇರಳದ ಹೈನುಗಾರರಿಗೆ ಸಮಗ್ರ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಡೇರಿ ಅಭಿವೃದ್ಧಿ ಮತ್ತು ಪಶುಸಂಗೋಪನಾ ಖಾತೆ ಸಚಿವೆ ಜೆ. ಚಿಂಜುರಾಣಿ ತಿಳಿಸಿದ್ದಾರೆ.
ಅವರು ನೀಲೇಶ್ವರ ಹಾಲು ಅಭಿವೃದ್ಧಿ ಘಟಕ ಮತ್ತು ಹಾಲು ಸಹಕಾರ ಸಂಘಗಳ ಜಂಟಿ ಆಶ್ರಯದಲ್ಲಿ ಮಿಲ್ಮಾ, ಪಶು ಕಲ್ಯಾಣ ಇಲಾಖೆಇಲಾಖೆ ಮತ್ತು ಕೇರಳ ಫೀಡ್ಸ್ ಸಹಯೋಗದೊಂದಿಗೆ ಎಡಯಿಲಕ್ಕಾಡ್‍ನಲ್ಲಿ ಆಯೋಜಿಸಲಾದ ನೀಲೇಶ್ವರ ಬ್ಲಾಕ್ ಹೈನುಗಾರರ ಸಮಾವೇಶ ಮತ್ತು ನೈರ್ಮಲ್ಯ ಹಾಲು ಸಂಗ್ರಹ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಚರ್ಮ ರೋಗ ಅಥವಾ ಅತಿಯಾದ ತಾಪಮಾನದಿಂದ ಸಾವನ್ನಪ್ಪುವ ದೊಡ್ಡ ಹಸುಗಳಿಗೆ ತಲಾ 37,500 ರೂ., ಸಣ್ಣ ಹಸುಗಳಿಗೆ ತಲಾ 20,000 ರೂ., ಮತ್ತು ಹುಟ್ಟಿನಲ್ಲೇ ಸಾವಿಗೀಡಾಗುವ ಹಸುಗಳಿಗೆ ತಲಾ 10,000 ರೂ. ವಿಮೆಯನ್ನು ಒದಗಿಸಲಾಗುವುದು. ಕೇರಳದ ಹೈನುಗಾರಿಕಾ ಉದ್ಯಮ ದೇಶದ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರೈತರ ಸಮಗ್ರ ಅಭಿವೃದ್ಧಿಗಾಗಿ ಹೈನು ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಐದರಿಂದ ಹತ್ತು ಹಸುಗಳನ್ನು ಖರೀದಿಸುವ ಹೈನುಗಾರರಿಗೆ ಬ್ಯಾಂಕುಗಳಿಂದ ಬಡ್ಡಿರಹಿತ ಸಾಲ ನೀಡಲಾಗುವುದು. ಹಸುಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಲುಬಾಯಿ ರೋಗದ ವಿರುದ್ಧ ಸೂಕ್ತ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸಮಗ್ರ ಪೆÇೀಷಣೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ತಿಳಿಸಿದರು.
ಜಿಲ್ಲೆಯ 35 ಸಹಕಾರಿ ಸಂಘಗಳಿಂದ ಸುಮಾರು 1250 ಮಂದಿ ಹೈನುಗಾರರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಡೇರಿ ಉತ್ಪನ್ನಗಳ ಪ್ರದರ್ಶನ, ಹಾಲು ಉತ್ಪನ್ನಗಳ ತಯಾರಿಕಾ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಡೈರಿ ಅಭಿವೃದ್ಧಿ ಇಲಾಖೆಯ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ 3.75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೈರ್ಮಲ್ಯ ಹಾಲು ಸಂಗ್ರಹ ಕೊಠಡಿ. ಮಿಲ್ಮಾದ 2.48 ಲಕ್ಷ ರೂ. ಅನುದಾನದೊಂದಿಗೆ ನಿರ್ಮಿಸಿದ ಹೈಜೀನಿಕ್ ಹಾಲು ಸಂಗ್ರಹಣಾ ಕೊಠಡಿ, ಪ್ರಯೋಗಾಲಯ ಸೌಲಭ್ಯಗಳು, ಕಚೇರಿ ಕೊಠಡಿ ಮತ್ತು ಪಶು ಆಹಾರ ಗೋದಾಮು ಸೇರಿದಂತೆ ವಿವಿಧ ವಿಭಾಗಗಳ ಉದ್ಘಾಟನೆ ನಡೆಯಿತು.
ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಂಎಂಎಫ್ ನಿರ್ದೇಶಕ ಪಿ.ನಾರಾಯಣನ್, ಎಂಆರ್‍ಸಿಎಂಪಿಯು ನಿರ್ದೇಶಕ ಕೆ ಸುಧಾಕರನ್, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿ.ವಿ.ಸಜೀವನ್, ಬಿ.ಕೆ.ಬಾವ, ಎ.ಜಿ.ಅಜಿತ್ ಕುಮಾರ್, ಪಿ.ಪಿ.ಪ್ರಸನ್ನಕುಮಾರಿ, ಮುಹಮ್ಮದ್ ಅಸ್ಲಂ, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ, ಜಿಪಂ ಸದಸ್ಯರು ಸೇರಿದಂತೆ ಇತರ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಸರಗೋಡುಹೈನುಗಾರಿಕೆ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸಿಜೋನ್ ಜಾನ್ಸನ್ ಕುನ್ನತ್ ವರದಿ ಮಂಡಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಕೆ. ಮಧುಸೂದನನ್ ಸ್ವಾಗತಿಸಿದರು. ನೀಲೇಶ್ವರಂ ಬ್ಲಾಕ್ ಡೈರಿ ಅಭಿವೃದ್ಧಿ ಅಧಿಕಾರಿ ಕೆ. ರಮ್ಯಾ ವಂದಿಸಿದರು.






