ನವದೆಹಲಿ: 'ಭಾರತದ ಮೇಲೆ ವಕ್ರದೃಷ್ಟಿ ಬೀರುವವರಿಗೆ ತಕ್ಕನಾದ ಪ್ರತ್ಯುತ್ತರ ಕೊಡುವುದು ನನ್ನ ಕರ್ತವ್ಯ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾನುವಾರ ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಕಾರಣರಾದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ರಾಜನಾಥ್ ಅವರು ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.
ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ, 'ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಶೈಲಿ, ಅವರ ದಿಟ್ಟ ನಿರ್ಧಾರ, ಜೀವನದಲ್ಲಿ ಅವರು ತೆಗೆದುಕೊಳ್ಳುವ ಸವಾಲುಗಳ ಬಗ್ಗೆ ಜನರಿಗೆ ಈಗಾಗಲೇ ತಿಳಿದಿದೆ. ಮೋದಿ ಸರ್ಕಾರದಿಂದ ನೀವು ಏನು ಆಗಬೇಕೆಂದು ಬಯಸಿದ್ದೀರೋ, ಅದು ಖಂಡಿತ ಆಗಲಿದೆ' ಎಂದಿದ್ದಾರೆ.
ಅಲ್ಲದೇ, 'ಈ ದೇಶದ ರಕ್ಷಣಾ ಸಚಿವನಾಗಿ ಭದ್ರತಾ ಪಡೆಗಳ ಬೆನ್ನಿಗೆ ನಿಲ್ಲುವುದು, ಗಡಿ ಸುರಕ್ಷತೆ ಖಾತರಿ ಪಡಿಸಿಕೊಳ್ಳುವುದು ಹಾಗೂ ದೇಶದ ಮೇಲೆ ವಕ್ರದೃಷ್ಟಿ ಬೀರಿದವರಿಗೆ ತಕ್ಕ ತಿರುಗೇಟು ನೀಡುವುದು ನನ್ನ ಕರ್ತವ್ಯ' ಎಂದೂ ರಾಜನಾಥ್ ಹೇಳಿದ್ದಾರೆ.




