ಕಾಸರಗೋಡು: ಚೆರ್ಕಳ ಸನಿಹದ ಬೇವಿಂಜೆಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಸಂಪೂರ್ಣ ನಾಶಗೊಂಡಿದೆ. ಶುಕ್ರವಾರ ಬೆಳಗ್ಗೆ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರ ತಂಡ ಪವಾಡಸದೃಶ ರೀತಿಯಲ್ಲಿ ಪಾರಾಗಿದೆ. ನ್ಯೂ ಮುಂಬೈ ಇಡಿಗ ನಿವಾಸಿ, ಗಲ್ಫ್ ಉದ್ಯೋಗಿ ಇಕ್ಬಾಲ್ ಅಹಮ್ಮದ್‍ಕುಟ್ಟಿ, ಪತ್ನಿ ರುಬೀನಾ, ಮಕ್ಕಳಾದ ನೌಫ್, ಅಸೀಸಾ ಹಾಗೂ ಉಮ್ಮರ್ ಪಾರದವರು.
ಒಂದುವರೆ ತಿಂಗಳ ಹಿಂದೆಯಷ್ಟೆ ಖರೀದಿಸಿದ್ದ ಸಿಎನ್‍ಜಿ ಚಾಲಿತ ಎರ್ಟಿಗಾ ಕಾರಿನಲ್ಲಿ ಮುಂಬೈಯಿಂದ ಕೇರಳದ ಕಣ್ಣೂರು ಜಿಲ್ಲೆಯ ಕಣ್ಣಪುರಂನ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಚೆರ್ಕಳ ಸನಿಹ ತಲುಪುತ್ತಿದ್ದಂತೆ ಕಾರಿನ ಯಂತ್ರದ ಭಾಗದಿಂದ ಹೊಗೆ ಹೊರಬರುತ್ತಿದ್ದುದನ್ನು ಗಮನಿಸಿದ ಅಹಮ್ಮದ್‍ಕುಟ್ಟಿ, ಕಾರು ನಿಲ್ಲಿಸಿ, ನಿದ್ದೆ ಮಂಪರಿನಲ್ಲಿದ್ದ ಪತ್ನಿ ಹಾಗೂ ಮಕ್ಕಳನ್ನು ಹೊರಗಿಳಿಸಿದ್ದರೆ. ಕ್ಷಣಾರ್ಧದಲ್ಲಿ ಬೆಂಕಿ ಕಾರಿಗೆ ಆವರಿಸಿದೆ. ತರತುರಿಯಲ್ಲಿ ಕೆಳಗಿಳಿಯುವ ಮಧ್ಯೆ ನಗದು, ಚಿನ್ನ, ಬಟ್ಟೆ, ಮೊಬೈಲ್, ಕರಿನ ದಾಖಲೆಪತ್ರ ಒಳಗೊಂಡ ಬ್ಯಾಗ್ ಕಾರಿನಲ್ಲೇ ಉಳಿದುಕೊಂಡಿದ್ದು, ಸಂಪೂರ್ಣ ನಾಶಗೊಂಡಿದೆ. ಕಾಸರಗೋಡಿನಿಂದ ಅಗನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿಶಮನಗೊಳಿಸಿದ್ದರೂ, ಕಾರು ಬಹುತೇಕ ಸುಟ್ಟುಹಾನಿಗೀಡಾಗಿತ್ತು.





