ಕಾಸರಗೋಡು: ಬಾಬಿ ಇಂಟರ್‍ನ್ಯಾಷನಲ್ ಗ್ರೂಪ್ ಸಹಯೋಗದೊಂದಿಗೆ ಕಾಸರಗೋಡು ಪ್ರೆಸ್ ಕ್ಲಬ್ ನೇತೃತ್ವದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ವೆಲ್ಫೇರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ರಾಜ್ಯ ಪತ್ರಕರ್ತರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಲಪ್ಪುರಂ ಪ್ರೆಸ್ ಕ್ಲಬ್ ತಂಡ ಮೊದಲ ಸ್ಥಾನ ಪಡೆದುಕೊಂಡಿತು.
ಕಣ್ಣೂರು ಪ್ರೆಸ್ ಕ್ಲಬ್ ದ್ವಿತೀಯ, ಕೇರಳ ಪತ್ರಕರ್ತರ ಒಕ್ಕೂಟದ ರಾಜ್ಯ ಸಮಿತಿ ತಂಡ ಮೂರನೇ ಸ್ಥಾನ ಮತ್ತು ಪತ್ತನಂತಿಟ್ಟ ಪ್ರೆಸ್ ಕ್ಲಬ್ ತಂಡ ನಾಲ್ಕನೇ ಸ್ಥಾನ ಗಳಿಸಿತು. ವಿಜೇತರಿಗೆ ಕಾಸರಗೋಡು ನಗರಸಭಾ ಅಧ್ಯಕ್ಷೆ ಅಬ್ಬಾಸ್ ಬೀಗಂ, ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರೆಹಮಾನ್ ಮತ್ತು ಬಾಬಿ ಗ್ರೂಪ್ ಪ್ರತಿನಿಧಿಗಳಾದ ಮುಸ್ತಫಾ ಮತ್ತು ಶ್ಯಾಮ್ ಪ್ರಶಸ್ತಿಫಲಕ ಹಾಗೂ ನಗದು ಬಹುಮಾನ ವಿತರಿಸಿದರು. ಉತ್ತರ ವಲಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಡಿವೈಎಫ್ ಐ ಜಿಲ್ಲಾ ಸಮಿತಿ ಪ್ರಥಮ, ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ದ್ವಿತೀಯ, ಎಐವೈಎಫ್ ಜಿಲ್ಲಾ ಸಮಿತಿ ತೃತೀಯ ಮತ್ತು ಸ್ಕಿನ್ನರ್ಸ್ ಕಾಸರಗೋಡು ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಸ್ಪರ್ಧಾ ವಿಜೇತರಿಗೆ ನಗರಸಭಾ ಸದಸ್ಯರಾದ ಕೆ.ಎಂ. ಹನೀಫಾ, ರಾಜೇಶ್ ಪ್ರಭು, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಕೆ.ಪಿ. ರೇಜಿ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಎಡಪ್ಪಲ್ ಟ್ರೋಫಿ ಮತ್ತು ನಗದು ಪ್ರಶಸ್ತಿ ವಿತರಿಸಿದರು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವದ ಜನಪ್ರತಿನಿಧಿಗಳ ತಂಡ ಮತ್ತು ಚಲನಚಿತ್ರ ನಟ ಪಿ.ಪಿ. ಕುಞÂಕೃಷ್ಣನ್ ನೇತೃತ್ವದ ಚಲನಚಿತ್ರ ನಟರ ನಡುವಿನ ಸೆಲೆಬ್ರಿಟಿ ಪಂದ್ಯಾಟ ಜನಾಕರ್ಷಣೆಗೆ ಕಾರಣವಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಜಹೀರ್ ಆಸಿಫ್, ಕೌನ್ಸಿಲರ್ ಕೆ.ಎಂ. ಹನೀಫಾ, ಬ್ಲಾಕ್ ಪಂಚಾಯಿತಿ ಸದಸ್ಯ ಸಿ.ವಿ.ಜೇಮ್ಸ್, ಕೆ.ಎ. ಮುಹಮ್ಮದ್ ಹನೀಫಾ, ಟಿ.ಕೆ. ರಾಜನ್, ಉಣ್ಣಿರಾಜ್ ಚೆರುವತ್ತೂರು, ವಕೀಲ ಸಿ. ಶುಕ್ಕೂರ್, ರಾಜೇಶ್ ಅಜಿಕ್ಕೋಡನ್, ಸಿಬಿ ಥಾಮಸ್, ಸಿ.ನಾರಾಯಣನ್, ಬೀನಾ ಕೊಡಕ್ಕಾಡ್, ಮತ್ತು ಶೈನಿ ವಿಜಯನ್ ಸೌಹಾರ್ದ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ಸ್ವಾಗತಿಸಿದರು.





