ಇಂಫಾಲ್: 'ಸರ್ಕಾರಿ ಬಸ್‌ನಲ್ಲಿ ರಾಜ್ಯದ ಹೆಸರು ತೆಗೆದುಹಾಕಿದ ಕ್ರಮ ಖಂಡಿಸಿ, ಮಣಿಪುರದ ಮೈತೇಯಿ ಸಮುದಾಯಗಳ ಸಮಗ್ರ ಸಮನ್ವಯ ಸಮಿತಿ (ಕೊಕೊಮಿ)ಯು ಮಂಗಳವಾರ ಕೇಂದ್ರ ಗೃಹಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ, ರಾಜ್ಯದ ಈಗಿನ ಸ್ಥಿತಿಗತಿ ಕುರಿತಂತೆ ಚರ್ಚಿಸಲಿದೆ' ಎಂದು ಸಂಚಾಲಕ ಖುರೈಜಮ್ ಥೌಬಾ ತಿಳಿಸಿದ್ದಾರೆ.
'ಘಟನೆ ಕುರಿತಂತೆ ರಾಜ್ಯಪಾಲ ಅಜಯ್‌ಕುಮಾರ್ ಭಲ್ಲಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಮುಖ್ಯಕಾರ್ಯದರ್ಶಿ, ಡಿಜಿಪಿ, ರಕ್ಷಣಾ ಸಲಹೆಗಾರರನ್ನು ತಕ್ಷಣದಿಂದ ಕಿತ್ತುಹಾಕಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗುವುದು' ಎಂದು ತಿಳಿಸಿದ್ದಾರೆ.
'ಕೇಂದ್ರ ಸರ್ಕಾರವು ಮಾತುಕತೆಗಾಗಿ ಮಂಗಳವಾರ ದಿನಾಂಕ ನಿಗದಿಪಡಿಸಿ ಕೊಕೊಮಿ ಸಂಘಟನೆಯನ್ನು ಆಹ್ವಾನಿಸಿದೆ. ಈ ವೇಳೆ ನಮ್ಮ ಬೇಡಿಕೆ ಮಂಡಿಸಲಾಗುವುದು' ಎಂದು ತಿಳಿಸಿದರು.
ಏನಾಗಿತ್ತು?: ಇಲ್ಲಿನ ಖರುಲ್ ಜಿಲ್ಲೆಯಲ್ಲಿ ಮೇ 20ರಂದು ಏರ್ಪಡಿಸಿದ್ದ ಪ್ರವಾಸಿ ಉತ್ಸವ ಶಿರೂಯಿ ಲೈಲಿ ಹಬ್ಬಕ್ಕೆ ಪತ್ರಕರ್ತರು ಮತ್ತು ಪೊಲೀಸರನ್ನು ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಭದ್ರತಾ ಪಡೆಗಳು ಬಸ್ ತಡೆದು, ಸಾರ್ವಜನಿಕ ಮಾಹಿತಿ ಇಲಾಖೆ(ಡಿಐಪಿಆರ್) ಸಿಬ್ಬಂದಿಗೆ ತಾಕೀತು ಮಾಡಿದರು. ಮಣಿಪುರ ಎಂಬ ನಾಮಫಲಕವನ್ನು ಬಿಳಿಯ ಕಾಗದದಿಂದ ಬಲವಂತವಾಗಿ ಮುಚ್ಚಿಸಿದ್ದರು ಎಂದು ಆರೋಪಿಸಲಾಗಿದೆ.
'ಹೆಸರು ತೆಗೆಸಿದ್ದು ಮಣಿಪುರ ವಿರೋಧಿ ಕ್ರಮ, ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಗ್ಗುರುತಿಗೆ ಒಡ್ಡಿದ ಸವಾಲು' ಎಂದು ಕೊಕೊಮಿ ಆರೋಪಿಸಿದೆ.




