ಬದಿಯಡ್ಕ: ಮಾತೃಭಾಷೆ ಅಥವಾ ಪರಿಸರ ಭಾಷೆಯ ಮಹತ್ವವನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಸಮತಾ ಸಾಹಿತ್ಯ ವೇದಿಕೆ, ಬದಿಯಡ್ಕ ಇವರು, ನೀರ್ಚಾಲು ಬನವಾಸಿ ಮನೆ ಪರಿಸರದಲ್ಲಿ ಮೇ.12 ರಂದು ಸಂಜೆ 6 ರಿಂದ ವಿನೂತನ ಸೌಹಾರ್ದ ಸಂವಾದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಮಗು ಅರಳುವ ಭಾಷೆ ಎಂಬ ಶೀರ್ಷಿಕೆಯಲ್ಲಿ ಈ ಸಂವಾದ ನಡೆಯಲಿದ್ದು, ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಈ ಮಾತುಕತೆ, ಚರ್ಚೆ ನಡೆಯಲಿದೆ.
ಕಾಸರಗೋಡಿನ ಕನ್ನಡ ಅಸ್ಮಿತೆ, ಮುಂದುವರಿಕೆ, ಕನ್ನಡ ಮಾಧ್ಯಮ ಶಾಲೆಗಳ ಬಗೆಗಿನ ಚಿಂತನ ಮಂಥನವು ನಡೆಯಲಿದ್ದು, ಸೌಹಾರ್ದ ಸಂವಾದದಲ್ಲಿ ಸುಮಾರು ನಲ್ವತ್ತು ಮಂದಿ ಭಾಗವಹಿಸುವರು. ಕಾಸರಗೋಡಿನ ಕನ್ನಡ, ತುಳು ಅಸ್ಮಿತೆಗಳ ಆಧಾರಗಳಾದ ಸ್ಥಳನಾಮ ಪಲ್ಲಟ ಪ್ರಕ್ರಿಯೆಯ ಕುರಿತು ಚರ್ಚೆ ನಡೆಯಲಿದೆ. ಕಾವ್ಯಗಾನಯಾನ, ಭಾವಗಾನಯಾನವು ನಡೆಯಲಿದ್ದು, ಇತ್ತೀಚೆಗಿನ ಸಾಹಿತ್ಯಕ ಕವಿಗೋಷ್ಠಿಗಳ ಧನಾತ್ಮಕ ಮತ್ತು ಋಣಾತ್ಮಕ ವಿಷಯಗಳು ಚರ್ಚೆಯ ವಿಷಯವಾಗಲಿದೆ. ವಿಶ್ರಾಂತ ಪ್ರಾಧ್ಯಾಪಕಿ ಡಾ ಪಾರ್ವತಿ ಐತಾಳ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಕನ್ನಡ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್ ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಡೂರಿನ ಅಂಗನವಾಡಿಯಲ್ಲಿ ಕನ್ನಡೇತರ ಅಧ್ಯಾಪಕಿಯ ನೇಮಕಾತಿ ವಿರುದ್ಧ, ನ್ಯಾಯಾಲಯದ ಮೆಟ್ಟಿಲೇರಲು ನೇತೃತ್ವ ವಹಿಸಿದ ನಯನ ಗಿರೀಶ್ ಸಂವಾದಕ್ಕೆ ಚಾಲನೆ ನೀಡುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಂಶೋಧನ ವಿದ್ಯಾರ್ಥಿ ಕಾರ್ತಿಕ್ ಪಡ್ರೆ, ಸಮತಾ ಸಾಹಿತ್ಯ ವೇದಿಕೆಯ ಸಂಚಾಲಕ ಸುಂದರ ಬಾರಡ್ಕ, ಡಾ. ರತ್ನಾಕರ ಮಲ್ಲಮೂಲೆ ಈ ಮುಂತಾದವರು ಉಪಸ್ಥಿತರಿರುವರು. ಕಾಸರಗೋಡಿನ ಕನ್ನಡ ಮೂಲ ಸ್ಥಳನಾಮಗಳನ್ನು ಅನುವಾದಿಸುವ ಅಥವಾ ವಿರೂಪಗೊಳಿಸುವ ಇತ್ತೀಚೆಗಿನ ಬೆಳವಣಿಗೆಯ ಕುರಿತು ಅಧ್ಯಯನ ಮಾಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನೂತನ ಸಮಿತಿಯೊಂದನ್ನು ರೂಪಿಸಿದ್ದು, ಈ ಸಮಿತಿಯ ಮೊದಲ ಸಭೆಯು ಕಾರ್ಯಕ್ರಮದ ಬಳಿಕ ನಡೆಯಲಿದೆ.




