ಕಾಸರಗೋಡು: ಬಂಗಾಳ ಕೊಲ್ಲಿಯ ಆಳಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕೇರಳದಲ್ಲಿ ಮುಂದಿನ ಐದು ದಿವಸಗಳ ಕಾಲ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳ ಹಾಗೂ ಲಕ್ಷದ್ವೀಪದ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾಸರಗೋಡು, ಮಲಪ್ಪುರಂ, ತೃಶ್ಯೂರ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಾಗೂ ಇತರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಣ್ಣೂರು, ವಯನಾಡ್, ಕೋಯಿಕ್ಕೋಡ್, ಕೋಟ್ಟಾಯಂ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.
ಕೇರಳದಲ್ಲಿ ರೈಲ್ವೆ ಹಳಿಗಳಿಗೆ ವ್ಯಾಪಕವಾಗಿ ಮರವುರುಳಿ ಬೀಳುತ್ತಿರುವ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ರೈಲುಗಳು ವಿಳಂಬವಾಗಿ ಓಡಾಟ ನಡೆಸುತ್ತಿದೆ. ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಹಾನಿಯುಂಟಾಗಿದೆ. ಚೆರ್ಕಳ-ಕಲ್ಲಡ್ಕ ಅಂತಾರಾರಾಜ್ಯ ಹೆದ್ದಾರಿ ಪೆರ್ಲ ಸನಿಹದ ಗೋಳಿತ್ತಡ್ಕದಲ್ಲಿ ಕುಸಿದ ಪರಿಣಾಮ ಭಾರಿ ಪ್ರಮಾಣದಲ್ಲಿ ಮಣ್ಣು ಕೃಷಿಕ ಬಿ.ಜಿ ರಾಮ ಭಟ್ ಅವರ ಅಡಕೆ ತೋಟದಲ್ಲಿ ದಾಸ್ತಾನಾಗಿದೆ.ಇದರಿಂದ 50ಕ್ಕೂ ಹೆಚ್ಚು ಅಡಕೆ ಮರಗಳು ಹಾನಿಗೀಡಾಗಿದೆ. ಪೈವಳಿಕೆ ಬಾಯಿಕಟ್ಟೆಯ ಬಾಳೆಹಿತ್ಲು ಪ್ರದೇಶದಲ್ಲಿ ಭಾರೀ ಭೂಕುಸಿತವುಂಟಾಗಿದ್ದು, ಆಸುಪಾಸಿನ ಹಲವು ಮನೆಗಳು ಅಪಾಯ ಎದುರಿಸುವಂತಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ:
ರಾಷ್ಟ್ರೀಯ ಹೆದ್ದಾರಿ 66 ರ ನಿರ್ಮಾಣದ ಅಂಗವಾಗಿ ಭೂಕುಸಿತದ ನಂತರ ಅಪಾಯದ ಅಪಾಯವಿರುವ ಪ್ರದೇಶಗಳಲ್ಲಿ ಡ್ರೋನ್ ತಪಾಸಣೆ ನಡೆಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಿರ್ಧರಿಸಿದೆ. ಷಟ್ಪಥ ಕಾಮಗಾರಿ ನಡೆಯುತ್ತಿರುವ ವೀರಮಲಕುನ್ನು, ಮಟ್ಟಲೈಕುನ್ನು ಮತ್ತು ಬೇವಿಂಜದಲ್ಲಿ ಭೂವಿಜ್ಞಾನ ಮತ್ತು ಮಣ್ಣು ಪರಿಶೋಧನಾ ಇಲಾಖೆಗಳ ನೇತೃತ್ವದಲ್ಲಿ ಮಣ್ಣಿನ ಜಂಟಿ ಸಮೀಕ್ಷೆ ನಡೆಸಲು ಸಹ ನಿರ್ಧರಿಸಲಾಯಿತು. ಗುಡ್ಡ ಪ್ರದೇಶದಲ್ಲಿ ಬಿರುಕುಗಳನ್ನು ಪರಿಶೀಲಿಸಲು ಮತ್ತು ದುರಂತ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಡ್ರೋನ್ ತಪಾಸಣೆ ತಪಾಸಣೆ ನಡೆಸಲಾಗುವುದು. ಮಳೆ ಮಾಪಕಗಳನ್ನು ಅಳವಡಿಸುವ ನಿಟ್ಟಿನಲ್ಲಿ ಹೆಚ್ಚುವರಿ ಮಳೆ ಮಾಪಕಗಳ ಖರೀದಿಗೆ ಅನುಮತಿ ನೀಡಲಾಗಿದೆ. ಮಳೆ ಮಾಪಕ ಅಳವಡಿಕೆಗೆ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ವಹಿಸಲು ನಿರ್ಧರಿಸಲಾಯಿತು. ಯಾವುದೇ ಮಾಹಿತಿಯಿದ್ದಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ(ದೂರವಾಣಿ 919446601700)ಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಎಡಿಎಂ ಅಖಿಲ್, ಸಹಾಯಕ ಜಿಲ್ಲಾಧಿಕಾರಿ ಎಂಡೋಸಲ್ಫಾನ್ ಸೆಲ್ ಲಿಪು ಎಸ್ ಲಾರೆನ್ಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಬಿ.ಸಂತೋಷ್, ಜಿಲ್ಲಾ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಬಿ.ರಾಜ್, ಮೀನುಗಾರಿಕೆ ಉಪ ನಿರ್ದೇಶಕ ಲಬೀಬ್ ಉಪಸ್ಥಿತರಿದ್ದರು.





