ಕಾಸರಗೋಡು: ಸಾರ್ವಜನಿಕರು ಸರ್ಕಾರದಿಂದ ಲಭಿಸಬೇಕಾದ ತಮ್ಮ ಹಕ್ಕುಗಳಿಗಾಗಿ ಕಾದುನಿಲ್ಲದೆ, ಕೇಳಿ ಪಡೆದುಕೊಳ್ಳುವಂತಾಗಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ ಸಚಿವ ಒ.ಆರ್.ಕೇಳು ತಿಳಿಸಿದ್ದಾರೆ.
ಅವರು ಕಾಂಞಂಗಾಡ್ ಬ್ಲಾಕ್ ಪಂಚಾಯಿತಿ ಮೇಲ್ಬರಂಬದ ಪರಿಶಿಷ್ಟ ಜಾತಿ 'ಉನ್ನತಿ'ಯಲ್ಲಿ ಸರ್ಕಾರದ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆಯನ್ವಯ ಲಭಿಸಿದ 1 ಕೋಟಿ ರೂ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಯೋಜನೆಯನ್ವಯ ಐದು ಯೋಜನೆಗಳ ಮೇಲೆ ಅಭಿವೃದ್ಧಿ ಕೇಂದ್ರೀಕೃತವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಸಮಾಜದ ಇತರ ವರ್ಗಗಳಲ್ಲಿರುವ ಅತ್ಯಂತ ಬಡವರನ್ನು ಮತ್ತೆ ಸಮುದಾಯದ ಮುಖ್ಯ ಧಾರೆಗೆ ಕರೆತರುವ ಚಟುವಟಿಕೆಗಳನ್ನು ನಡೆಸುತ್ತಿದೆ. ಶಾಲಾ ಆಸ್ಪತ್ರೆರಸ್ತೆಗಳಿಂದ ಆರಂಭಿಸಿ ಸರ್ವತೋಮುಖ ಬೆಳವಣಿಗೆ ಸರ್ಕಾರದ ಗುರಿಯಾಗಿದ್ದು, ಕೇರಳ ಸರ್ಕಾರ ಎಲ್ಲಾ ವಿಭಾಗಗಳನ್ನು ಒಟ್ಟುಗೂಡಿಸುವ ಮೂಲಕ ಮುನ್ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಶಾಸಕ ಸಿಎ.ಎಚ್ ಕುಞಂಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ, ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆಯ ಅಂಗವಾಗಿ ಆಯ್ಕೆ ಮಾಡಲಾದ 60 ಬಹುಮಹಡಿ ಕಟ್ಟಡಗಳಲ್ಲಿ 13 ಕಟ್ಟಡಗಳನ್ನು ನವೀಕರಿಸಲಾಗಿದ್ದು, ಉಳಿದವುಗಳ ಕೆಲಸವನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಇ.ಪಿ. ರಾಜಮೋಹನ್ ವರದಿ ಮಂಡಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್, ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಉದುಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ ಬಾಲಕೃಷ್ಣನ್, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕೆ ವಿಜಯನ್, ಉದುಮ ಗ್ರಾಪಂ ಸದಸ್ಯರಾದ ಸುನೀಲ್ ಕುಮಾರ್ ಮೂಲಾಯಿಲ್, ಎನ್. ಚಂದ್ರನ್, ಪರಿಶಿಷ್ಟ ಜಾತಿ ಜಿಲ್ಲಾ ಸಲಹಾ ಸಮಿತಿ ಸದಸ್ಯ ಚಂದ್ರನ್ ಕೋಕಲ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಕೆ.ವಿ. ರವಿರಾಜ್ ಸ್ವಾಗತಿಸಿದರು. ಕಾಂಞಂಗಾಡ್ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಅಧಿಕಾರಿ ಪಿ.ಬಿ. ಬಶೀರ್ ವಂದಿಸಿದರು.





