ಕಾಸರಗೊಡು: ವಿವಿಧ ಪ್ರಕರಣಗಳಲ್ಲಿ ಕಾಸರಗೋಡು ಹಾಗೂ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ಸೇರಿದಂತೆ ಮೂರು ಮಂದಿ ನೇಣಿಗೆ ಶರಣಾಗಿದ್ದಾರೆ. ಕುಂಬಳೆ ಮಾವಿನಕಟ್ಟೆ ನಿವಾಸಿ ಹರೀಶ್ ಗಟ್ಟಿ ಎಂಬವರ ಪುತ್ರ, ಲೈಟಿಂಗ್ಸ್ ಸಂಸ್ಥೆ ಸಿಬ್ಬಂದಿ ನಿತಿನ್‍ಕುಮಾರ್ ಗಟ್ಟಿ(25)ಅವರ ಮೃತದೇಹ ಮನೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ತಡ ರಾತ್ರಿ ಮನೆಗೆ ಆಗಮಿಸಿದ್ದ ಇವರು, ಆಹಾರ ಸೇವಿಸಿ ಕೊಠಡಿಯಲ್ಲಿ ಮಲಗಿದ್ದು, ಮಂಗಳವಾರ ಬೆಳಗ್ಗೆ ಬಹಳ ಹೊತ್ತಿನವರೆಗೂ ಎದ್ದೇಳದ ಹಿನ್ನೆಲೆಯಲ್ಲಿ ಮನೆಯವರು ಕೊಠಡಿಗೆ ತೆರಳಿ ನೋಡಿದಾಗ ನಿತಿನ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಕಾಲೇಜು ವಸತಿಗೃಹದ ಕೊಠಡಿಯಲ್ಲಿ ವಿದ್ಯಾರ್ಥಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಾಣತ್ತೂರು ಕಣಿತ್ತೋಡು ನಿವಾಸಿ, ದಿನೇಶನ್ ಎಂಬವರ ಪುತ್ರ, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಥಮ ವರ್ಷ ಬಿ.ಎಸ್ಸಿ(ಪ್ರಾಣಿಶಾಸ್ತ್ರ)ವಿದ್ಯಾರ್ಥಿ ಅಬಿಷೇಕ್ ಪಿ.ಡಿ(20)ಸಾವನ್ನಪ್ಪಿದ ವಿದ್ಯಾರ್ಥಿ. ಸರ್ಕಾರಿ ಕಾಲೇಜಿನ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‍ನಲ್ಲಿ ವಾಸ್ತವ್ಯಹೂಡಿ ಕಾಲೇಜಿಗೆ ತೆರಳುತ್ತಿದ್ದ ಇವರ ಮೃತದೇಹ ಸೋಮವಾರ ರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಚೆಂಗಳ ಬಾರಿಕ್ಕಾಡ್ ನಾಲ್ತಡ್ಕ ನಿವಾಸಿ ಗೋಪಾಲನ್(72)ಎಂಬವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ ಕೃತ್ಯವೆಸಗಿದ್ದರು. ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





