ಕುಂಬಳೆ: ಕುಂಬಳೆಯ ರಾಷ್ಟ್ರೀಯ ಹೆದ್ದಾರಿಯ ಅರಿಕ್ಕಾಡಿ ಸೇತುವೆಯ ಬಳಿ ಟೋಲ್ ಪ್ಲಾಜಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿವೆ.
ಸ್ಥಳೀಯರು ಮತ್ತು ಯೂತ್ ಲೀಗ್ ಕಾರ್ಯಕರ್ತರು ನಿರ್ಮಾಣ ಕಾರ್ಯವನ್ನು ತಡೆದ ನಂತರ, ಕಳೆದ ಶನಿವಾರ ಕುಂಬಳೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಯಿತು. ಟೋಲ್ ಬೂತ್ ನಿರ್ಮಾಣ ವಿರುದ್ಧ ಎರಡು ದಿನಗಳ ಒಳಗೆ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ, ಮುಷ್ಕರ ಘೋಷಿಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಜೊತೆಗೆ ಟೋಲ್ ಪ್ಲಾಜಾ ನಿರ್ಮಿಸುವ ಬಗ್ಗೆ ಅರಿವಿಗೆ ಬಂದು ದಿನಗಳು ಕಳೆದಿದ್ದು ಜನ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳದೆ ದಿವ್ಯ ಮೌನದಲ್ಲಿದ್ದರು. ಕೊನೆಗೂ ಸಾರ್ವಜನಿಕರ ಆಕ್ರೋಶ ಬುಗಿಲೇಳುವ ಹಂತದಲ್ಲಿ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿರುವರು. ಆದರೆ ಅವರು ಸರಿಯಾದ ಉತ್ತರ ನೀಡಲು ಸಿದ್ಧರಾಗಿಲ್ಲ.
ಇದನ್ನು ವಿರೋಧಿಸಿ, ಸ್ಥಳೀಯರು ವಿವಿಧ ಪಕ್ಷ, ಸಂಘಟನೆಗಳ ಜನರನ್ನು ಒಳಗೊಂಡ ದೊಡ್ಡ ಪ್ರಮಾಣದ ಮುಷ್ಕರವನ್ನು ಘೋಷಿಸಲು ಯೋಜಿಸುತ್ತಿದ್ದಾರೆ.
ಕುಂಬಳೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಪಕ್ಷ ರಾಜಕೀಯವನ್ನು ಲೆಕ್ಕಿಸದೆ ಶಾಸಕರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಯಿತು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಿಂದಾಗಿ ಕುಂಬಳೆ ನಗರಕ್ಕೆ ಪ್ರವೇಶ ದ್ವಾರ ಮುಚ್ಚಿದ್ದರಿಂದ ಉಂಟಾದ ಅನಾಹುತದ ನಂತರ, ಸಮೀಪದಲ್ಲಿ ಟೋಲ್ ಪ್ಲಾಜಾದ ಮತ್ತೊಂದು ಅನಾಹುತ ಸನ್ನಿಹಿತವಾಗಿರುವುದು ವ್ಯಾಪಾರಿಗಳು ಸೇರಿದಂತೆ ಜನರನ್ನು ತೀವ್ರ ಕಳವಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗುತ್ತಿದೆ.





