ಬದಿಯಡ್ಕ: ಬಿರುಸಿನ ಮಳೆ ಸುರಿದು ವಿವಿಧೆಡೆಗಳಲ್ಲಿ ಹಾನಿಯುಂಟಾಗಿದೆ. ಶನಿವಾರ ರಾತ್ರಿ ಎಡನೀರು ಸಮೀಪದ ಚೂರಿಮೂಲೆ ಎಂಬಲ್ಲಿ ತೆಂಗಿನಮರವೊಂದು ರಸ್ತೆಯ ಮೇಲೆ ಸಾಗುತ್ತಿದ್ದ ವಿದ್ಯುತ್ ತಂತಿಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಬದಿಯಡ್ಕ ಗ್ರಾಮಪಂಚಾಯಿತಿ 12ನೇ ವಾರ್ಡಿನಲ್ಲಿ ವಳಮಲೆಯಲ್ಲಿ ವಾಸಿಸುವ ಉದನೇಶ್ವರ ಎಂಬವರ ಮನೆಯ ಹಿತ್ತಿಲು ಕುಸಿದಿದೆ. ಚೆಡೆಕ್ಕಲ್ ಎಂಬಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ನೀರುನಿಂತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗಿದೆ.
ವಿದ್ಯುತ್ ಮೊಟಕು :
ಶನಿವಾರ ದಿನವಿಡೀ ಬಿಟ್ಟು ಬಿಟ್ಟು ಸುರಿದ ಗಾಳಿ ಮಳೆಗೆ ವಿವಿಧೆಡೆಗಳಲ್ಲಿ ವಿದ್ಯುತ್ ಕಂಬಗಳ ಧರೆಗುರುಳಿವೆ. ಬದಿಯಡ್ಕ ಸೆಕ್ಷನ್‍ನಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಕಂಬಗಳು ಹಾಗೂ 200ರಷ್ಟು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದ ಪರಿಣಾಮ ರಾತ್ರಿಯಿಡೀ ವಿದ್ಯುತ್ ಕೈಕೊಟ್ಟಿದೆ. ಭಾನುವಾರದ ಜಡಿಮಳೆಯನ್ನೂ ಲೆಕ್ಕಿಸದೆ ಕಾರ್ಮಿಕರು ಕೆಲಸಮಾಡುತ್ತಿದ್ದರೂ ಸಂಜೆ ತನಕ ವಿದ್ಯುತ್ ಬಾರದಿರುವುದು ಸಾರ್ವಜನಿಕರಿಗೆ ಸಮಸ್ಯೆಯುಂಟಾಗಿದೆ. ರಸ್ತೆಗಳಿಗೆ ಅಡ್ಡವಾಗಿ ಬಿದ್ದ ಮರಗಳನ್ನು ತೆರವುಗೊಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಕರಿಸಿದ್ದರು. ಬದಿಯಡ್ಕ, ಪಳ್ಳತ್ತಡ್ಕ, ನೀರ್ಚಾಲು, ಕಿಳಿಂಗಾರು, ಏತಡ್ಕ ಮೊದಲಾದ ಕಡೆಗಳಲ್ಲಿ ಅಡಿಕೆ ಕೃಷಿಕರ ತೋಟದಲ್ಲಿ ಮರಗಳು ಮುರಿದು ಬಿದ್ದು ವ್ಯಾಪಕ ನಷ್ಟ ಉಂಟಾಗಿದೆ. ಕೆಲವೊಂದು ಅಡಿಕೆ ತೋಟಗಳಲ್ಲಿ 20ಕ್ಕೂ ಹೆಚ್ಚು ಮರಗಳು ಮುರಿದು ಹೋಗಿವೆ. ವಿಪರೀತ ಗಾಳಿಯಿಂದಾಗಿ ಹೆಚ್ಚಿನ ನಷ್ಟ ಉಂಟಾಗಿದೆ.




.jpg)

