ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ತಲುಪುವ ಹಂತದಲ್ಲಿ ವ್ಯಾಪಕ ವಂಚನೆಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ. ಇದೀಗ ಕುಂಬಳೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ಬೂತ್ ಗೆ ಸಂಬಂಧಿಸಿ ವಿವಾದ ಹುಟ್ಟಿಕೊಂಡಿದೆ.
ನಾಗರಿಕರು ನೀಡಿದ ಮಾಹಿತಿಯಂತೆ ಸಂಸದ ರಾಜಮೋಹನ ಉಣ್ಣಿತಾನ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್,ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನ್,ಉದುಮ ಶಾಸಕ ಸಿ.ಎಚ್.ಕುಂಞಂಬು ಮೊದಲಾದವರು ನಿನ್ನೆ ಸಂಜೆ ಟೋಲ್ ಗೇಟ್ ಕಾಮಗಾರಿ ಸ್ಥಳಕ್ಕೆ ದೌಢಾಯಿಸಿದರು.
ಬಳಿಕ ನಾಗರಿಕ ಹಿತಾಸಕ್ತಿಯಿಂದ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗಲೇ ನಾಗರಿಕರು ಟೋಲ್ ಗೇಟ್ ನಿರ್ಮಾಣಕ್ಕಾಗಿ ಕಾರ್ಮಿಕರು ತೋಡಿದ ಹೊಂಡವನ್ನು ಮುಚ್ಚಿದರು. ಈ ವೇಳೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಕೆಲಸ ಉಪೇಕ್ಷಿಸಿ ಮರಳಿದರು.
ಜಿಲ್ಲೆಯ ಅಭಿವೃದ್ಧಿ ಚಟುವಟಿಕೆಗಳ ನೇತೃತ್ವ ಮತ್ತು ಉಸ್ತುವಾರಿ ವಹಿಸುವ ಜಿಲ್ಲಾಭಿವೃದ್ಧಿ ಸಮಿತಿ ಸಭೆ ಮೇ 3ರಂದು ಜರುಗಿದ್ದು, ಇದರಲ್ಲಿ ಟೋಲ್ ಗೇಟ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ನಿರ್ಣಯಿಸಿ ಠರಾವು ಮಂಡಿಸಲಾಗಿತ್ತು. ಇದರಂತೆ ಜಿಲ್ಲಾಧಿಕಾರಿ ಕಾಮಗಾರಿ ಸ್ಥಗಿತಗೊಳಿಸಲು ನಿರ್ದೇಶಿಸಿದ್ದರು. ಆದರೆ ಅದನ್ನುಲ್ಲಂಘಿಸಿ ಆದಿತ್ಯವಾರ ಅಪರಾಹ್ನ ಕಾಮಗಾರಿ ಮುಂದುವರಿಸಿದ್ದರು. ಗುತ್ತಿಗೆದಾರರು ಮತ್ತು ಹೆದ್ದಾರಿ ಇಲಾಖೆಯ ಈ ನಿಷೇಧಾತ್ಮಕ ನಿಲುವುಲಖಂಡನೀಯ ಎಂದ ಸಂಸದ, ಶಾಸಕರು ಯಾವುದೇ ಕಾರಣಕ್ಕೂ ಕುಂಬಳೆಯಲ್ಲಿ ಟೋಲ್ ಗೇಟ್ ಸ್ಥಾಪಿಸುವಂತಿಲ್ಲ. ಇದು ಕೇವಲ ಕುಂಬಳೆಯ ಸಮಸ್ಯೆಯಲ್ಲ, ಸಮಗ್ರ ಕಾಸರಗೋಡಿನ ಜನತೆಯ ಸಮಸ್ಯೆ. ಟೋಲ್ ಗೇಟ್ ಬಂದರೆ ಅದು ಎಲ್ಲರನ್ನೂ ಬಾಧಿಸುವ ವಿಷಯ. ಇಂಥ ಸಂಕೀರ್ಣ ಸಮಸ್ಯೆಯ ಹೋರಾಟದಲ್ಲಿ ಕುಂಬಳೆಯ ವ್ಯಾಪಾರಿಗಳು ಮತ್ತು ಇತರ ಕೆಲ ರಾಜಕೀಯ ಪಕ್ಷಗಳು ಭಾಗವಹಿಸದಿರುವುದು ಅತ್ಯಂತ ಶೋಚನೀಯ ಎಂದು ಜನಪ್ರತಿನಿಧಿಗಳು ನುಡಿದರು.
ಟೋಲ್ ಗೇಟ್ ವಿರುದ್ಧ ನಾಗರಿಕ ಹೋರಾಟ ಸಮಿತಿ ರೂಪಿಸಿ, ಕಾನೂನಿನ ಮೊರೆ ಹೋಗುವ ಕೆಲಸಗಳು ನಡೆಯುತ್ತಿದೆ. ಈ ಹಂತದಲ್ಲಿ ನಾಗರಿಕ ಕಾಳಜಿಯಿಂದ ಹೋರಾಟದಲ್ಲಿ ಕೈ ಜೋಡಿಸುವ ಬದಲು ತಟಸ್ಥ ನಿಲುವು ಪಾಲಿಸುವುದು ಜನದ್ರೋಹ ನೀತಿಯಾಗಿದೆ. ಇದು ಜನಪರ ಹೋರಾಟದ ಸಂದರ್ಭ. ನಾಗರಿಕರೆಲ್ಲರ ಬೆಂಬಲದಿಂದ ಕಾನೂನು ಮೂಲಕ ಟೋಲ್ ಗೇಟಿಗೆ ತಡೆಯಾಜ್ಞೆ ತರಬೇಕೆಂದು ಸಂಸದ, ಶಾಸಕರು ತಿಳಿಸಿದರು.




.jpeg)
.jpeg)
