ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ಹಗಲು ಮಳೆ ಪ್ರಮಾಣ ಅಲ್ಪ ತಗ್ಗಿದ್ದು, ಸಂಜೆಯಿಂದ ಬಿರುಸುಪಡೆದುಕೋಂಡಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಹೊಳೆ-ತೋಡುಗಳು ತುಂಬಿ ಹರಿಯುತ್ತಿದೆ.
ಬುಧವಾರ ರಾತ್ರಿ ಕಾಸರಗೋಡು ಜಿಲ್ಲಾದ್ಯಂತ ಗಾಳಿಯಿಂದ ಕೂಡಿದ ಬಿರುಸಿನ ಮಳೆಯಾಗಿದ್ದು, ವಿವಿಧೆಡೆ ಮರಗಳು ಬುಡಸಹಿತ ಕಳಚಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು. ಚಂದ್ರಗಿರಿ ಸನಿಹದ ಕೀಯೂರಿನಲ್ಲಿ ಎಂಟಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ವಿದ್ಯುತ್ ಕಂಬವೊಂದು ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡಿತ್ತು. ಜೀವಾಪಾಯ ಸಂಭವಿಸಿಲ್ಲ.
ಸಮುದ್ರ ಕೊರೆತ ವ್ಯಾಪಕ:
ಮಳೆ ಬಿರುಸುಪಡೆದುಕೊಳ್ಳುತ್ತಿದ್ದಂತೆ ಜಿಲ್ಲೆಯ ಕರಾವಳಿಯಲ್ಲಿ ಸಮುದ್ರ ಕೊರೆತ ಹೆಚ್ಚಾಗತೊಡಗಿದೆ. ಮಂಜೇಶ್ವರ ಪಂಚಾಯಿತಿ ಕಣ್ವತೀರ್ಥ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಕಡಲ್ಕೊರೆತದಿಂದ ಹಲವಾರು ತೆಂಗು ಸೇರಿದಂತೆ ವಿವಿಧ ಮರಗಳು ಸಮುದ್ರಪಾಲಾಗಿದೆ. ಇಲ್ಲಿನ ನಿವಾಸಿ ಜೆಸಿಂತ ಎಂಬವರ ಮನೆ ಆವರಣಗೋಡೆ ಸಮುದ್ರಕೊರೆತದಿಂದ ಹಾನಿಗೀಡಾಗಿದ್ದು, ಮನೆಯಿಂದ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಇಲ್ಲಿನ ರಸ್ತೆ, ಖಾಸಗಿ ರೆಸಾರ್ಟ್ ಹಾಗೂ ಮನೆಗಳೂ ಅಪಾಯದಂಚಿನಲ್ಲಿದೆ. ಮಂಗಲ್ಪಾಡಿ ಹನುಮಾನ್‍ನಗರ, ಮಣಿಮುಂಡ, ಶಾರದಾನಗರ, ಮೂಸೋಡಿ ಪ್ರದೇಶದಲ್ಲಿ ಸಮುದ್ರಕೊರೆತದಿಂದ ಅಪಾರ ಹಾನಿ ಸಂಭವಿಸಿದೆ. ಕೆಲವು ಮನೆಗಳು ಅಪಾಯದಂಚಿನಲ್ಲಿದ್ದು, ಹನುಮಾನ್ ನಗರದಲ್ಲಿ ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯೂ ಸಮುದ್ರಕೊರೆತದಿಂದ ಅಪಾಯದಂಚಿನಲ್ಲಿದೆ. ಸಮುದ್ರಕೊರೆತ ಪ್ರದೇಶಕ್ಕೆ ಪಂಚಾಯಿತಿ ಅಧ್ಯಕ್ಷೆ ಜೀನ್ ಲವಿನಾ ನೇತೃತ್ವದದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿದರು.
(PHOTO: ಚಂದ್ರಗಿರಿ ಕೀಯೂರಿನಲ್ಲಿ ಬಿರುಸಿನ ಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಂ ಕಾರು ಹಾನಿಗೀಡಾಗಿದೆ.)



