ಕಾಸರಗೋಡು: ನಗರದ ಅಣಂಗೂರಿನ ಶ್ರೀ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಕಳೆದ ಎಂಟು ದಿವಸಗಳಿಂದ ನಡೆದುಬರುತ್ತಿದ್ದ 1930ನೇ ಮದ್ಯವರ್ಜನ ಶಿಬಿರ ಸೋಮವಾರ ಸಮಾರೋಪಗೊಂಡಿತು. ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ 21ನೇ ಶಿಬಿರ ಇದಾಗಿದ್ದು, ಶಿಬಿರದಲ್ಲಿ ಪಾಲ್ಗೊಂಡಿದ್ದ 67ಮಂದಿ ಕುಡಿತ ಬಿಟ್ಟು ಹೊಸ ಜೀವನಕ್ಕೆ ಕಾಲಿರಿಸುವ ಬಗ್ಗೆ ದೃಢ ನಿಶ್ಚಯ ಕೈಗೊಂಡರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಯುವಪೀಳಿಗೆಯಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ಬಳಕೆ, ಸಮಾಜವನ್ನು ಅಸ್ಥಿರಗೊಳಿಸುತ್ತಿದೆ. ಮನುಷ್ಯರಿಂದ ತಪ್ಪಾಗುವುದು ಸಹಜ, ಇದನ್ನು ತಿದ್ದಿ ನಡೆದಾಗ ಜೀವನ ಸುಂದರವಾಗುವುದು. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಮದ್ಯವರ್ಜನ ಶಿಬಿರಗಳು ಸಹಕಾರಿಯಾಗಲಿದೆ. ಶಿಬಿರಾರ್ಥಿಗಳು ದೃಢಚಿತ್ತದೊಂದಿಗೆ ಜೀವನ ಮುಂದುವರಿಸಲು ಪಣತೊಟ್ಟಾಗ ಶ್ರೀಧರ್ಮಸ್ಥಳ ಕ್ಷೇತ್ರ ವತಿಯಿಂದ ನಡೆಸುವ ಇಂತಹ ಶಿಬಿರಗಳು ಹೆಚ್ಚು ಫಲಪ್ರದವಾಗುವುದಾಗಿ ತಿಳಿಸಿದರು.
ಕಾಸರಗೋಡು 1930ನೇ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿದ್ಯುತ್ ನಿಗಮ ಮಂಡಳಿ ಕಾಸರಗೋಡು ಜಿಲ್ಲಾ ಸ್ಥಾಯೀ ಕೌನ್ಸಿಲ್, ವಕೀಲ ಉದಯಕುಮಾರ್ ಗಟ್ಟಿ, ಶ್ರೀಧರ್ಮಸ್ಥಳ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಗೋಪಾಲ ಶೆಟ್ಟಿ ಅರಿಬೈಲು, ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ, ಭಜನಾಪರಿಷತ್ ಅಧ್ಯಕ್ಷ ಡಾ. ವೆಂಕಟ್ರಮಣ ಹೊಳ್ಳ, ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಘಟಕ ಅಧ್ಯಕ್ಷ ಅಖಿಲೇಶ್ ನಗುಮುಗಂ, ಅಶ್ವಥ್ ಪೂಜಾರಿ ಲಾಲ್‍ಭಾಗ್, ಜ್ಞಾನೇಶ್ವರ ಆಚಾರ್ಯ, ಡಾ. ಗಾಯತ್ರಿ, ಜಯಲಕ್ಷ್ಮೀಶಿವಶಂಕರ್ ನೆಕ್ರಾಜೆ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಯೋಗ ಶಿಕ್ಷಕಿ ತೇಜಹರೀಶ್, ಆರೋಗ್ಯ ಸಹಾಯಕಿ ನೇತ್ರಾವತಿ ಉಪಸ್ಥಿತರಿದ್ದರು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಶಿಬಿರಾರ್ಥಿಗಳ ಭಾವೀ ಜೀವನದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಸ್ವಾಮೀಜಿ ಬಹುಮಾನ ವಿತರಿಸಿ, ಶಿಬಿರ ಸೇವಾರ್ಥಿಗಳನ್ನು ಗೌರವಿಸಿದರು.
ಕ್ಷೇತ್ರ ಯೋಜನಾಧಿಕಾರಿ ದಿನೇಶ್ ಸ್ವಾಗತಿಸಿದರು. ಜನಜೀವನ ಸಮಿತಿ ಸದಸ್ಯ ಬಿಜು ವಂದಿಸಿದರು.
ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಣಂಗೂರು ಕಾಸರಗೋಡು ತಾಲೂಕು ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಾಸರಗೋಡು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜಿಲ್ಲಾ ನವಜೀವನ ಸಮಿತಿ ಕಾಸರಗೋಡು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಾಸರಗೋಡು ತಾಲೂಕು, ನಗರ ಸಭೆ ಕಾಸರಗೋಡು, ತಾಲೂಕು ಆರೋಗ್ಯ ಕೇಂದ್ರ ಕಾಸರಗೋಡು, ಆರಕ್ಷಕ ಠಾಣೆ ಕಾಸರಗೋಡು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಸರಗೋಡು ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಊರಿನ ದಾನಿಗಳ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.




.jpg)
.jpg)

