ಉಪ್ಪಳ: ಪೈವಳಿಕೆ ಪಂಚಾಯಿತಿ ಕಳಾಯಿ ನಿವಾಸಿ ಅಶೋಕ್ ಕುಮಾರ್ ಶೆಟ್ಟಿ ಅವರ ಮನೆಯಿಂದ 50ಸಾವಿರ ರೂ. ನಗದು ಮತ್ತು ಸಿಸಿ ಕ್ಯಾಮರಾ ಸಲಕರಣೆ ಕಳವುಗೈದಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಶೋಕ್ ಕುಮಾರ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಇವರ ತಂದೆ ಮಾತ್ರ ವಾಸಿಸುತ್ತಿದ್ದಾರೆ. ಜೂ. 8ರಂದು ಬೆಳಗ್ಗೆ ಅಶೋಕ್‍ಕುಮಾರ್ ಅವರ ತಂದೆಗೆ ಆಹಾರ ನೀಡಲು ನಿತ್ಯ ಮನೆಗೆ ಆಗಮಿಸುತ್ತಿದ್ದ ಅವರ ಸಂಬಂಧಿ ಮನೆಗೆ ಆಗಮಿಸಿದಾಗ ಅಡುಗೆ ಕೊಠಡಿ ಬಾಗಿಲು ತೆರೆದಿರಿಸಿರುವುದು ಕಂಡು ಬಂದಿತ್ತು. ನಂತರ ಅಶೊಕ್‍ಕುಮಾರ್ ಅವರಿಗೆ ನೀಡಿದ ಮಾಹಿತಿಯನ್ವಯ ಆಗಮಿಸಿ ತಪಾಸಣೆ ನಡೆಸಿದಾಗ ಕಳವು ಬೆಳಕಿಗೆ ಬಂದಿದೆ. ಇದೇ ಮನೆಯಿಂದ ಏಳು ತಿಂಗಳ ಹಿಂದೆ ಮನೆ ಕೆಲಸಕ್ಕಿದ್ದ ವ್ಯಕ್ತಿಯೇ ನಗ, ನಗದು ಕಳವುಗೈದಿದ್ದನು. ನಂತರ ಆತನನ್ನು ಪೊಲೀಸರು ಬಂಧಿಸಿದ್ದು, ಈತ ಇನ್ನೂ ಜೈಲಿನಲ್ಲಿದ್ದಾನೆ. ಅಶೋಕ್ ಕುಮಾರ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




