ಕಾಸರಗೊಡು: ನಾಲ್ಕನೇ ತರಗತಿಯಲ್ಲಿ ಉಂಟಾಗಿದ್ದ ಜಗಳದ ಹೆಸರಲ್ಲಿ ಸಹಪಾಠಿಗಳಿಬ್ಬರು ತಮ್ಮ 62ನೇ ವಯಸ್ಸಲ್ಲಿ ಪರಸ್ಪರ ಜಗಳಾಡಿಕೊಂಡ ಘಟನೆ ವೆಳ್ಳರಿಕುಂಡಿನಲ್ಲಿ ನಡೆದಿದೆ. ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋಂ ವೆಟ್ಟಕೊಂಬಿಲ್ ನಿವಾಸಿ ಬಾಬು(62)ಎಂಬವರ ದೂರಿನ ಮೇರೆಗೆ ಇವರ ಸಹಪಾಠಿ ಬಾಲಕೃಷ್ಣನ್(62)ಹಾಗೂ ಅವರ ಸ್ನೇಹಿತ ಮ್ಯಾಥ್ಯೂ(61)ಎಂಬವರ ವಿರುದ್ಧ ಕೇಸು ದಾಖಲಾಗಿದೆ.
ಬಾಬು ಮತ್ತು ಬಾಲಕೃಷ್ಣನ್ ನಾಲ್ಕನೇ ತರಗತಿಯಲ್ಲಿ ಸಹಪಾಠಿಗಳಾಗಿದ್ದು, ತರಗತಿಯಲ್ಲಿ ಯವುದೋ ವಿಷಯಕ್ಕೆ ಸಂಬಂಧಿಸಿ ಇವರ ಮಧ್ಯೆ ಜಗಳವಾಗಿತ್ತು. ವಾರದ ಹಿಂದೆ ಇಬ್ಬರೂ ಪರಸ್ಪರ ಭೇಟಿಯಾದಾಗ 50ವರ್ಷಕ್ಕೂ ಹಿಂದೆ ತಮ್ಮ ಬಾಲ್ಯಕಾಲದಲ್ಲಿ ನಡೆದಿದ್ದ ಜಗಳ ಪ್ರಸ್ತಾಪವಾಗಿದ್ದು, ಈ ಹೆಸರಲ್ಲಿ ಇವರಿಬ್ಬರ ಮಧ್ಯೆ ವಾಗ್ವಾದ ನಡೆದು, ಸ್ಥಳೀಯರು ಇವರನ್ನು ಬೇರ್ಪಡಿಸಿ ಕಳುಹಿಸಿದ್ದರು. ಇದಾದ ಮೂರು ದಿವಸಗಳ ನಂತರ ಮತ್ತೆ ಇವರು ವೆಳ್ಳರಿಕುಂಡು ಪೇಟೆಯಲ್ಲಿ ಪರಸ್ಪರ ಭೇಟಿಯಾದಾಗ ಹಳೇ ದ್ವೇಷದ ಹೆಸರಲ್ಲಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಬಾಬು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರೆ. ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ಸೇರಿ ಥಳಿಸಿರುವುದಾಘಿ ಬಾಬು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.




