ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ನೇತೃತ್ವದಲ್ಲಿ ಪ್ರಕಟಿಸುತ್ತಿರುವ ಕನ್ನಡಿಯಲ್ಲಿ ಕನ್ನಡಿಗ(ಸಂಚಿಕೆ 3 ಮತ್ತು 4)ಕೃತಿಗಳ ಲೋಕಾರ್ಪಣೆ ಸಮಾರಂಭ ಜೂ.7 ರಂದು ಅಪರಾಹ್ನ 2.30 ರಿಂದ ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಕೃತಿಕಾರ ಡಾ.ರಮಾನಂದ ಬನಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ, ವಿಮರ್ಶಕ ಅರವಿಂದ ಚೊಕ್ಕಾಡಿ ಕೃತಿ ಬಿಡುಗಡೆಗೊಳಿಸಿ ಅವಲೋಕನ ನಡೆಸುವರು. ಕಸಾಪ ದ.ಕ.ನಿಕಟಪೂರ್ವಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ವೈದ್ಯ ಡಾ.ಮುರಳೀಮೋಹನ ಚೂಂತಾರು, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಗಳಾಗಿರುವರು. ಸಂಚಿಕೆ ಸಂಪಾದಕರಾದ ಟಿ.ಎ.ಎನ್.ಖಂಡಿಗೆ, ಡಾ.ಪ್ರಮೀಳಾ ಮಾಧವ್ ಉಪಸ್ಥಿತರಿರುವರು. ಕಾಸರಗೋಡು ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಗೌರವ ಉಪಸ್ಥಿತರಿರುವರು. ಡಾ.ನಾ.ದಾಮೋದರ ಶೆಟ್ಟಿ, ಡಾ.ಮೋಹನ ಕುಂಟಾರು, ಡಾ.ಗೋವಿಂದ ಭಟ್ ಕೊಳ್ಚಪ್ಪೆ ವಿಶೇಷ ಆಹ್ವಾನಿತರಾಗಿರುವರು. ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ರಾಜಾರಾಮ ರಾವ್ ಚಿಗುರುಪಾದೆ, ಲಕ್ಷ್ಮೀ ವಿ.ಭಟ್ ಚಿಗುರುಪಾದೆ ನೇತೃತ್ವ ವಹಿಸುವರು. ಕೀರಿಕ್ಕಾಡ್ ಮಾಸ್ತರ್ ವಿಷ್ಣು ಭಟ್ ಸ್ಮಾರಕ ಯಕ್ಷಗಾನ ಅಧ್ಯಯನ ಕೇಂದ್ರ ಬನಾರಿ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಸಹಯೋಗ ನೀಡಲಿದೆ.






