HEALTH TIPS

Amarnath Yatra | ಸುರಕ್ಷಿತ ಅಮರನಾಥ ಯಾತ್ರೆಗೆ 'ಆಪರೇಷನ್‌ ಶಿವ'

ಶ್ರೀನಗರ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬೆನ್ನಲ್ಲೇ, ಅಮರನಾಥ ಯಾತ್ರಿಕರಿಗೆ ಬಹು ಪದರದ ಗರಿಷ್ಠ ಭದ್ರತೆ ಕಲ್ಪಿಸುವ ಉದ್ದೇಶದಿಂದ ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಜಂಟಿಯಾಗಿ 'ಆಪರೇಷನ್‌ ಶಿವ' ಯೋಜನೆಯನ್ನು ಜಾರಿಗೆ ತಂದಿದೆ.

ಅಮರನಾಥ ಯಾತ್ರಿಕರಿಗೆ ಹೆಜ್ಜೆ ಹೆಜ್ಜೆಗೂ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು 'ಆಪರೇಷನ್‌ ಶಿವ' ಖಾತರಿಪಡಿಸಲಿದೆ.

ಈ ವರ್ಷದ ಯಾತ್ರೆಯು ಜುಲೈ 3ರಿಂದ ಆರಂಭಗೊಳ್ಳಲಿದ್ದು, ಆಗಸ್ಟ್‌ 9ಕ್ಕೆ ಮುಗಿಯಲಿದೆ. ಕಳೆದ ವರ್ಷದ 52 ದಿನಗಳಿಗೆ ಹೋಲಿಸಿದರೆ ಈ ಬಾರಿ ಯಾತ್ರೆಯು 38 ದಿನಗಳಿಗೆ ತಗ್ಗಿದೆ. ಪಹಲ್ಗಾಮ್‌ ದಾಳಿಯ ಬೆನ್ನಲ್ಲೇ ಗಡಿ ಭದ್ರತೆ ಮತ್ತಿತರ ಅಂಶಗಳಿಗೆ ಮಹತ್ವ ನೀಡಿರುವುದರಿಂದ ಯಾತ್ರೆಯ ಅವಧಿಯನ್ನು ತಗ್ಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸುಧಾರಿತ ಭದ್ರತಾ ತಂತ್ರಜ್ಞಾನ, ಸಿಸಿಟಿವಿ, ಜಾಮರ್‌ಗಳ ಅಳವಡಿಕೆ, ಡ್ರೋನ್‌ ಕ್ಯಾಮೆರಾ, ಸಶಸ್ತ್ರ ಪಡೆ ಕಣ್ಗಾವಲು ಸೇರಿದಂತೆ ಯಾತ್ರಾರ್ಥಿಗಳು ಸಾಗುವ ದಾರಿಯಲ್ಲಿ ಗರಿಷ್ಠ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುವುದು ಎಂದು ಮೂಲಗಳು ಹೇಳಿವೆ.

ಜಮ್ಮು ಕಾಶ್ಮೀರ ಪೊಲೀಸರ ಜತೆಗೆ 50 ಸಾವಿರಕ್ಕೂ ಹೆಚ್ಚು ಅರೆಸೇನಾ ಪಡೆ ಸಿಬ್ಬಂದಿ ದೈನಂದಿನ ಭದ್ರತಾ ತಪಾಸಣೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಯಾತ್ರಿಕರು ಸಾಗುವ ಮಾರ್ಗದ ಸೂಕ್ಷ್ಮ ಪ್ರದೇಶಗಳನ್ನುಗುರುತಿಸಿ, ಅಲ್ಲಿ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಸಾಂಪ್ರದಾಯಿಕ ಪಹಲ್ಗಾಮ್‌ ಮತ್ತು ಬಲ್ಟಾಲ್ ಎರಡೂ ಮಾರ್ಗಗಳಲ್ಲಿ ಈಗಾಗಲೇ ತ್ರಿ-ಡಿ ಮ್ಯಾಪಿಂಗ್‌ ಮಾಡಲಾಗಿದ್ದು, ಎರಡೂ ಮಾರ್ಗಗಳ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ವಿಸ್ತೃತ ಭದ್ರತಾ ಪರಿಶೀಲನೆ ನಡೆಯಲಿದೆ.

ನೋಂದಾಯಿತ ಯಾತ್ರಿಕರಿಗೆ 'ಆರ್‌ಎಫ್‌ಐಡಿ' ಟ್ಯಾಗ್‌ ನೀಡಲಾಗಿದ್ದು, ಅಮರನಾಥ ಯಾತ್ರೆಯ ಪ್ರತಿ ಕ್ಷಣದ ಮೇಲೂ ಇದರ ಮೂಲಕ ನಿಗಾ ವಹಿಸಬಹುದಾಗಿದೆ.

'ಈ ವರ್ಷದ ಅಮರನಾಥ ಯಾತ್ರೆಯು ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ. ನಾವು ಭಯೋತ್ಪಾದನೆಗೆ ಹೆದರುವುದಿಲ್ಲ ಎನ್ನುವುದರ ಸಂದೇಶವೂ ಆಗಿದೆ' ಎಂದು 'ಆಪರೇಷನ್‌ ಶಿವ' ತಂಡದಲ್ಲಿರುವ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries